ಕುಶಾಲನಗರ, ಮೇ ೧೧: ಮೂಢನಂಬಿಕೆಗಳ ಹೆಸರಿನಲ್ಲಿ ಪೂಜಾ ತ್ಯಾಜ್ಯಗಳನ್ನು ನದಿಗೆ ಎಸೆಯುವ ಮೂಲಕ ನದಿ ಕಲುಷಿತಗೊಳಿಸುವುದು ಸರಿಯಲ್ಲ ಎಂದು ಅರ್ಚಕ ಕೃಷ್ಣಮೂರ್ತಿ ಭಟ್ ತಿಳಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಕಾವೇರಿ ಆರತಿ ಬಳಗದ ಆಶ್ರಯದಲ್ಲಿ ನಡೆದ ೧೪೪ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪೂಜಾ ಸಾಮಗ್ರಿಗಳನ್ನು ಅಥವಾ ಇತರೆ ತ್ಯಾಜ್ಯಗಳನ್ನು ನದಿಗೆ ಅಥವಾ ಜಲಮೂಲಗಳಿಗೆ ಅರ್ಪಿಸಲು ಯಾವುದೇ ಪುರಾಣದಲ್ಲಿ ಹೇಳಿರುವುದಿಲ್ಲ ಎಂದು ತಿಳಿಸಿದರು. ಸ್ವಚ್ಛವಾಗಿ ಹರಿಯುವ ನದಿಯನ್ನು ಕಲುಷಿತಗೊಳಿಸಿದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸ ಬೇಕಾಗಿದೆ ಎಂದು ಅವರು ಕರೆ ನೀಡಿದರು. ಇದೇ ಸಂದರ್ಭ ಮಾತನಾಡಿದ ಯೋಗ ಶಿಕ್ಷಕರಾದ ಮಧುಸೂದನ್, ನದಿ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿರುವ ಬಳಗದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು. ಅರ್ಚನೆ, ಅಷ್ಟೋತ್ತರ ನಂತರ ಕಾವೇರಿಗೆ ಮಹಾ ಆರತಿ ಬೆಳಗಲಾಯಿತು. ಈ ಸಂದರ್ಭ ಉದ್ಯಮಿ ಹಾಗೂ ಧಾರ್ಮಿಕ ಸಂಸ್ಥೆಗಳ ಪ್ರಮುಖರಾದ ಜನಾರ್ಧನ್ ವಸಿಷ್ಠ, ಕೊಡವ ಸಮಾಜದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ, ನಿರ್ದೇಶಕಿ ಧರಣಿ ಸೋಮಯ್ಯ, ನಿವೃತ್ತ ಶಿಕ್ಷಣಾಧಿಕಾರಿ ಕೆಂಚಪ್ಪ, ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.