ಶನಿವಾರಸಂತೆ, ಮೇ ೮: ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಪರ ಅವರ ಸಹೋದರ ರಾಜ್ಯ ಮುಖಂಡ ನಾಪಂಡ ಮುದ್ದಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಚುನಾವಣಾ ಪ್ರಚಾರ ಹಾಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದರು.

ಕೊಡ್ಲಿಪೇಟೆ ಗಡಿಭಾಗ ಶಾಂತಪುರ ಗ್ರಾಮದ ಗಣಪತಿ ದೇವಾಲಯದಿಂದ ಬ್ಯಾಡಗೊಟ್ಟ ಗ್ರಾಮದ ಹ್ಯಾಂಡ್‌ಪೋಸ್ಟ್ ವೃತ್ತದವರೆಗೆ ನೂರಾರು ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಜಾಥಾ ನಡೆಯಿತು.

ನಂತರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ನಾಪಂಡ ಮುದ್ದಪ್ಪ ಮಾತನಾಡಿ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ನಾವು ಹೋರಾಟ ಮಾಡುತ್ತಿರುವಾಗ ರಾಷ್ಟಿçÃಯ ಪಕ್ಷದವರು ಮುತ್ತಪ್ಪ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೋಮುವಾದಿಗಳ ವಿರುದ್ಧ ನಾವು ಮಾತನಾಡಿದಷ್ಟು, ವಿರೋಧಿಸಿದಷ್ಟೂ ಇವರು ಮಾತನಾಡಿಲ್ಲ ಎಂದರು.

ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ರಮೇಶ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮೌರ್ಯ ಮಾತನಾಡಿ ಮತ ಯಾಚಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜ್, ರಾಜ್ಯ ಸಮಿತಿ ಸದಸ್ಯ ಎಸ್.ಡಿ. ತಮ್ಮಯ್ಯ, ಹೋಬಳಿ ಅಧ್ಯಕ್ಷ ದಿನೇಶ್, ಯುವ ಘಟಕದ ಅಧ್ಯಕ್ಷ ವಸಂತ್ ಇತರರು ಇದ್ದರು.