ಶನಿವಾರಸಂತೆ, ಮೇ ೮: ಕೊಡ್ಲಿಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಮಂಥರ್ ಗೌಡ ಪರ ಬಹಿರಂಗ ಪ್ರಚಾರ ಸಭೆ ಹಾಗೂ ಬೈಕ್ ಜಾಥಾ ಮೂಲಕ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು.

ಸಂತೆ ದಿನವಾದ ಭಾನುವಾರ ಸಂಜೆ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಿ ಮುಖಂಡರು ಮಾತನಾಡಿದರು.

ಕೆಪಿಸಿಸಿ ವಕ್ತಾರ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೩೮.೧ ರಷ್ಟು ಯುವ ಮತದಾರರಿದ್ದು ಯುವಕರಿಗೆ ಅವಕಾಶ ನೀಡಬೇಕು ಎಂಬ ನಿಟ್ಟಿನಲ್ಲಿ ತಾನು ತ್ಯಾಗ ಮಾಡಿ ಮಂಥರ್ ಗೌಡ ಅವರಿಗೆ ಸ್ಥಾನ ಬಿಟ್ಟುಕೊಟ್ಟಿರುವೆ. ಇವರ ಗೆಲುವಿಗೆ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದರು.

ಕೊಡ್ಲಿಪೇಟೆ ೪೦ ವರ್ಷದ ಹಿಂದೆ ಹೇಗಿತ್ತೋ ಈಗಲು ಹಾಗೇ ಇದೆ. ಜನರ ಮತ ಪಡೆದು ಜಯಗಳಿಸಿದ ಶಾಸಕರು ಕೊಡ್ಲಿಪೇಟೆ ಹೋಬಳಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ನನ್ನ ಊರಿಗೆ ೨ ಯೋಜನೆಗಳನ್ನು ಹಾಕಿಕೊಂಡಿದ್ದೆ. ಒಂದು ಹೇಮಾವತಿ ನದಿಯಿಂದ ೩೦ ಹಳ್ಳಿಗಳಿಗೆ ನೀರು ತರುವ ಯೋಜನೆ. ಶಾಸಕರ ಅಸಹಕಾರದಿಂದ ಇದು ಸಾಧ್ಯವಾಗಲಿಲ್ಲ. ಇನ್ನೊಂದು ಸ್ನೇಹಿತ ನೀರಾವರಿ ಸಚಿವ ಮಾಧುಸ್ವಾಮಿಯವರ ಹೇಳಿಕೆಯಂತೆ ನಂದಿಪುರ ಕೆರೆ ಅಭಿವೃದ್ಧಿಪಡಿಸಿ ಉದ್ಯಾನ ನಿರ್ಮಿಸಲು ರೂ. ೪ ಕೋಟಿ ಯೋಜನೆಯನ್ನು ತಯಾರು ಮಾಡಿ ಕಾರ್ಯಕ್ರಮ ನಿಮಿತ್ತ ಬಂದಿದ್ದಾಗ ಅದನ್ನು ನೀಡಿದ್ದೆವು. ಶಾಸಕರಿಗೆ ಸುದ್ದಿ ತಲುಪಿ, ಸಚಿವರಿಗೆ ಕರೆ ಮಾಡಿ ಇದನ್ನು ಮಾಡಿದರೆ ಪ್ರತಿಭಟನೆ ಮಾಡುವುದಾಗಿ ಹೇಳಿದ ಕಾರಣ, ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ದೂರಿದರು.

ಡಾ. ಮಂಥರ್ ಗೌಡ ಮಾತನಾಡಿ, ಒಂದೂವರೆ ತಿಂಗಳಿನಿAದ ನಿರಂತರ ಪ್ರಚಾರ ಮಾಡುತ್ತಾ ಮತದಾರನ ಮನವೊಲಿಸಲು ಪ್ರಯತ್ನಿಸುತ್ತಿರುವೆ. ಜನಪರ ಕೆಲಸ ಮಾಡಲು ೧ ಬಾರಿ ಶಾಸಕನಾದರೆ ಸಾಕು. ಬದಲಾವಣೆಗಾಗಿ ನನಗೆ ಅವಕಾಶ ನೀಡಿ. ಗಡಿಭಾಗ ಕೊಡ್ಲಿಪೇಟೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕಾಡಾನೆ ಹಾವಳಿ ಸಮಸ್ಯೆ ಜೀವಂತವಾಗಿದೆ. ಹೋಬಳಿಗೊಂದು ಪವರ್ ಸ್ಟೇಷನ್ ಇರಬೇಕಿತ್ತು. ೨೫ ವರ್ಷ ಶಾಸಕರಾಗಿದ್ದವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಇವರು ಕೇವಲ ೬ ತಿಂಗಳು ಮಾತ್ರ ಶಾಸಕರಾಗಿದ್ದರು ಎಂದು ಕುಟುಕಿದರು.

ವೀರಶೈವ ಸಮಾಜದ ಮುಖಂಡ ಶಾಂತವೇರಿ ವಸಂತ್, ಹಣಕೋಡು ಸುರೇಶ್, ಉಸ್ತುವಾರಿ ಅಧ್ಯಕ್ಷ ಕೆ.ಎಂ. ಲೋಕೇಶ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ಗೌಡ ಹಾಗೂ ಇತರರು ಮಾತನಾಡಿದರು.

ರೋಡ್ ಶೋ: ಬ್ಯಾಡಗೊಟ್ಟ ಪಂಚಾಯಿತಿ ಮುಂಭಾಗದಿAದ ಆರಂಭವಾದ ಬೈಕ್ ಜಾಥಾ ಹ್ಯಾಂಡ್ ಪೋಸ್ಟ್ ವೃತ್ತದ ಮೂಲಕ ಚಿಕ್ಕಾಕುಂದ, ಬೆಸೂರು, ನಿಲುವಾಗಿಲು, ಗ್ರಾಮಕ್ಕೆ ಹೋಗಿ ಹಿಂದಿರುಗಿ ದೊಡ್ಡಕುಂದ, ಕೊಡ್ಲಿಪೇಟೆ ಮೂಲಕ ಶಾಂತಪುರಕ್ಕೆ ಹೋಗಿ ಪುನಃ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಸಮಾಪ್ತಿಯಾಯಿತು. ನೂರಾರು ಬೈಕ್ ಸವಾರ ಕಾರ್ಯಕರ್ತರು ಪಾಲ್ಗೊಂಡಿದ್ದರು.