ಕುಶಾಲನಗರ, ಮೇ ೭: ಕುಶಾಲನಗರ ಸಮೀಪದ ಬೈಲುಕೊಪ್ಪೆ ಬಳಿ ಅನಾಥ ವೃದ್ಧೆಯೊಬ್ಬರ ಮನೆಯ ಸುತ್ತಮುತ್ತ ಸ್ವಚ್ಛ ಮಾಡುವ ಮೂಲಕ ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾನವೀಯತೆ ಮೆರೆದರು.

ಬೈಲುಕೊಪ್ಪೆ ಬಳಿಯ ಹಳೆವೂರಿನಲ್ಲಿ ಸುಮಾರು ೮೭ ವರ್ಷ ಪ್ರಾಯದ ಮುನಿಯಮ್ಮ ಎಂಬವರು ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಹಲವು ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಈ ಅನಾಥ ವೃದ್ಧೆ ಮನೆಯ ಸುತ್ತಮುತ್ತ ಗಿಡಗಳು ಬೆಳೆದು ಹಾವು ಮತ್ತಿತರ ಪ್ರಾಣಿಗಳ ಆವಾಸ ಸ್ಥಾನದಂತೆ ಪರಿವರ್ತನೆಗೊಂಡಿತ್ತು. ಮನೆಯ ಒಳಗಡೆ ಸೌದೆ ರಾಶಿ ಹಾಕಿದ್ದು ಒಟ್ಟಾರೆ ಬದುಕು ದುರ್ಬರವಾಗಿತ್ತು. ಇದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ೭ನೇ ಹೊಸಕೋಟೆಯ ಘಟಕದ ನಿರ್ಮಲ ಅವರ ನೇತೃತ್ವದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೊಪ್ಪ ವಲಯದ ಹಳೆವೂರು ಕಾರ್ಯಕ್ಷೇತ್ರದ ಒಕ್ಕೂಟ ಸದಸ್ಯರು ಸ್ಥಳೀಯರ ಸಹಕಾರದೊಂದಿಗೆ ಮನೆಯ ಒಳ ಹಾಗೂ ಹೊರಭಾಗವನ್ನು ಸ್ವಚ್ಛಗೊಳಿಸಿದರು. ಸ್ವಚ್ಛತೆ ಸಂದರ್ಭ ಸುತ್ತಮುತ್ತ ಬೆಳೆದಿದ್ದ ಪೊದೆ ನಡುವೆ ಬೃಹತ್ ಗಾತ್ರದ ಹಾವು ಕೂಡ ಪತ್ತೆಯಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿಯವರ ಮಾರ್ಗದರ್ಶನದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ತಾಲೂಕಿನ ಯೋಜನಾಧಿಕಾರಿ ಸುರೇಶ್ ಶೆಟ್ಟಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳು, ಸ್ಥಳೀಯ ಪ್ರಮುಖರಾದ ರಾಜೇಶ್ ಬೈಲುಕೊಪ್ಪ, ರಘು ಹಳೆವೂರು, ವೇಣುಗೋಪಾಲ್, ಯೋಜನೆಯ ವಲಯ ಮೇಲ್ವಿಚಾರಕಿ ಮಧುರಾ ವಸಂತ್, ಜ್ನಾನವಿಕಾಸ ಸಮನ್ವಯಧಿಕಾರಿ ಶಾರದಾ, ಸ್ಥಳೀಯ ಸೇವಾಪ್ರತಿನಿಧಿ ಶೋಭ ಹಾಗೂ ವಲಯದ ಸೇವಾಪ್ರತಿನಿಧಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೈಜೋಡಿಸಿದರು.