ಗೋಣಿಕೊಪ್ಪಲು, ಮೇ ೭: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಕೆ.ಜಿ. ಬೋಪಯ್ಯನವರ ಪರವಾಗಿ ಮತ ಯಾಚಿಸಲು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ವಾಣಿಜ್ಯ ನಗರ ಗೋಣಿಕೊಪ್ಪಕ್ಕೆ ಆಗಮಿಸಿ ಕಾಲೇಜು ಮಕ್ಕಳೊಂದಿಗೂ ಬೆರೆತರು.
ನಿಗದಿತ ಸಮಯಕ್ಕೆ ಮುಂಜಾನೆ ಹೆಲಿಕಾಪ್ಟರ್ ಮೂಲಕ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮರವರನ್ನು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಬಿಜೆಪಿ ಪಕ್ಷದ ಪ್ರಮುಖರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಸಿ.ಕೆ. ಬೋಪಣ್ಣ, ವಾಟೇರಿರ ಬೋಪಣ್ಣ, ಶಿವು ನಾಣಯ್ಯ ಸೇರಿದಂತೆ ಅನೇಕ ಗಣ್ಯರು ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.
ಅಸ್ಸಾಂ ಮುಖ್ಯಮಂತ್ರಿ ಆಗಮನದ ಹಿನ್ನಲೆಯಲ್ಲಿ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಸರತಿ ಸಾಲಿನಲ್ಲಿ ಶಿಕ್ಷಕ ವೃಂದದೊAದಿಗೆ ನೆರೆದಿದ್ದರು. ಹೆಲಿಕಾಫ್ಟರ್ನಿಂದ ಇಳಿದ ಅಸ್ಸಾಂ ಮುಖ್ಯಮಂತ್ರಿಗಳು ಬಿಗಿಭದ್ರತೆಯ ನಡುವೆ ಕಾಲೇಜಿನ ಆವರಣದಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು ಗಮನಿಸಿ ವಿದ್ಯಾರ್ಥಿಗಳತ್ತ ತೆರಳಿದರು. ಈ ವೇಳೆ ಕೆಲವು ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಉಭಯಕುಶಲೋಪರಿ ನಡೆಸಿದರು. ಕಾಲೇಜಿನ ಶಿಕ್ಷಕವೃಂದ ಹಾಗೂ ಪ್ರಾಂಶುಪಾಲರು ಈ ವೇಳೆ ಕಾಲೇಜಿನ ಬಗ್ಗೆ ವಿವರ ನೀಡಿದರು.
ಬಿಗಿ ಭದ್ರತೆಯ ನಡುವೆ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪ್ರತಿಮೆಗಳಿಗೆ ಅಸ್ಸಾಂ ಮುಖ್ಯಮಂತ್ರಿಗಳಾದ ಹಿಮಂತ್ ಬಿಸ್ವ ಶರ್ಮ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಮುಖ್ಯಮಂತ್ರಿಗಳು ವಾಹನದ ಮೂಲಕ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಪಕ್ಷದ ಬೃಹತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಸ್ಸಾಂ ಮುಖ್ಯಮಂತ್ರಿಗಳು ಆಗಮಿಸಿದ ವೇಳೆ ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯನ್ನು ಕೆಲಕಾಲ ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಿಸಲಾಗಿತ್ತು. ಪ್ರತಿಮೆಗಳಿಗೆ ಮಾಲಾರ್ಪಾಣೆ ಮಾಡಿ ಇವರ ವಾಹನಗಳು ತೆರಳಿದ ನಂತರ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.
ಅಸ್ಸಾಂ ಮುಖ್ಯಮಂತ್ರಿ ಆಗಮನದ ಹಿನ್ನಲೆಯಲ್ಲಿ ಇವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ರಸ್ತೆಯ ಉದ್ದಾಗಲಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.