ಕುಶಾಲನಗರ, ಮೇ ೭: ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿಪರ ಕೆಲಸಗಳ ಮುಂದುವರಿಕೆಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವಂತೆ ಮಾಡಲು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಕರೆ ನೀಡಿದರು. ಕುಶಾಲನಗರದಲ್ಲಿ ಬಿಜೆಪಿಯಿಂದ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೂಲಕ ರಾಜ್ಯ ಹಿಂದೆAದೂ ಕಾಣದ ಅಭಿವೃದ್ಧಿ ಕಂಡಿದೆ ಎಂದ ಅವರು, ಬಿಜೆಪಿ ಮೇಲೆ ಭರವಸೆ ಇಟ್ಟು ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂಜನ್ ಅವರಿಗೆ ಮತ ಚಲಾಯಿಸುವಂತೆ ಕೋರಿದರು.
ಈ ಸಂದರ್ಭ ಮಾತನಾಡಿದ ಬಸವಪಟ್ಟಣದ ಶ್ರೀಗಳಾದ ಬಸವಲಿಂಗ ಸ್ವತಂತ್ರ ಸ್ವಾಮೀಜಿ ಕಾಂಗ್ರೆಸ್ ಪಕ್ಷದ ಮಾತುಗಳನ್ನು ನಂಬಿ ಮೋಸ ಹೋಗದಂತೆ ಪ್ರತಿಯೊಬ್ಬರು ಎಚ್ಚರವಹಿಸಬೇಕಾಗಿದೆ ಎಂದರು. ಮಡಿಕೇರಿ ಕ್ಷೇತ್ರ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತನ್ನನ್ನು ಮತ್ತೊಮ್ಮೆ ಆಯ್ಕೆ ಮಾಡುವ ಮೂಲಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅನಂತಕುಮಾರ್ ಮಾತ ನಾಡಿದರು.
ಸಭೆಗೂ ಮುನ್ನ ಶಿರಂಗಾಲ, ಹೆಬ್ಬಾಲೆ, ಕೂಡಿಗೆ, ಶುಂಠಿಕೊಪ್ಪ, ಹೊಸಕೋಟೆ ಸುತ್ತಮುತ್ತಲ ವ್ಯಾಪ್ತಿಯಿಂದ ಬೈಕ್ನಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಾಜಿ ಎಸ್.ಜಿ. ಮೇದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಮಾಜಿ ಬಿ.ಬಿ. ಭಾರತೀಶ್ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪುರಸಭಾ ಅಧ್ಯಕ್ಷ ಜಯವರ್ಧನ್, ಮನುಕುಮಾರ್ ರೈ, ಕುಶಾಲನಗರ ಬಿಜೆಪಿ ಪ್ರಮುಖರಾದ ಉಮಾಶಂಕರ್, ನಗರಾಧ್ಯಕ್ಷ ಕೆ.ಜಿ. ಮನು, ಶಿವಾಜಿ ಮತ್ತಿತರರು ಇದ್ದರು.