ಕೂಡಿಗೆ, ಮೇ ೭: ಜಿಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಹಾರಂಗಿ ಅಣೆಕಟ್ಟೆಯ ಬೃಂದಾವನ ಉದ್ಯಾನವನ ವೀಕ್ಷಣೆ , ಸಂಜೆ ಅತ್ಯಾಕರ್ಷಕವಾದ ಸಂಗೀತ ಕಾರಂಜಿ, ಇದರ ಜೊತೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ನೂತನ ಸಾಕಾನೆ ಶಿಬಿರವು ಇರುವುದರಿಂದಾಗಿ ಹಾರಂಗಿಯಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ದಂಡು ಹೆಚ್ಚುತ್ತಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟ್, ದುಬಾರೆ, ಹಾರಂಗಿ, ಕಾವೇರಿ ನಿಸರ್ಗಧಾಮದಲ್ಲಿ ಪ್ರವಾಸಿಗರ ದಂಡು ಕಾಣಸಿಗುತ್ತಿದೆ.
ಜಿಲ್ಲೆಗೆ ಬರುವ ರಾಜ್ಯ, ಅಂತರರಾಜ್ಯದ ಪ್ರವಾಸಿಗರು ಜಿಲ್ಲಾ ಕೇಂದ್ರ ನಂತರ ದುಬಾರೆ ಮತ್ತು ಹಾರಂಗಿ ಕಾವೇರಿ ನಿಸರ್ಗಧಾಮಗಳಿಗೆ ಭೇಟಿ ನೀಡುತ್ತಾರೆ. ಹಾರಂಗಿಯಲ್ಲಿ ಎರಡು ವೀಕ್ಷಣಾ ಕೇಂದ್ರಗಳು ಇರುವುದರಿಂದಾಗಿ ದಿನಗಳೆದಂತೆ ಪ್ರವಾಸಿಗರು ಹೆಚ್ಚು ಆಗಮಿಸುತ್ತಿದ್ದಾರೆ.
ಈಗಾಗಲೇ ನೂತನವಾಗಿ ಆರಂಭಗೊAಡಿರುವ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿವಿಧ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಂಜೆ ಸೂರ್ಯ ಮುಳುಗುವ ದೃಶ್ಯವನ್ನು ವೀಕ್ಷಣೆ ಮಾಡಲು ಬೇಕಾಗುವ ಸೌಕರ್ಯಗಳನ್ನು ಅರಣ್ಯ ಇಲಾಖೆಯ ವತಿಯಿಂದ ಕಲ್ಪಿಸಲಾಗಿದೆ.
ಮುಂದಿನ ದಿನಗಳಲ್ಲಿ ಸಾಕಾನೆ ಶಿಬಿರದಲ್ಲಿ ಸವಾರಿ ಆರಂಭಿಸಿ ಪ್ರವಾಸಿಗರನ್ನು ಹೆಚ್ಚು ಸೆಳೆಯುವ ರೀತಿಯಲ್ಲಿ ಇಲಾಖೆಯವರು ಮುಂದಾಗಬೇಕೆAಬುದು ಪ್ರವಾಸಿಗರ ಆಗ್ರಹವಾಗಿದೆ.
- ಕೆ.ಕೆ. ನಾಗರಾಜಶೆಟ್ಟಿ.