ಮಡಿಕೇರಿ, ಮೇ ೮: ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವದ ಹೆಸರಿನಲ್ಲಿ ತಾವು ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರಿಂದ ವೈಯಕ್ತಿಕವಾಗಿ ಹಣ ಪಡೆದಿರುವುದಾಗಿ ಕಾಂಗ್ರೆಸ್ ವಕ್ತಾರ ಬಿ.ಎಸ್. ತಮ್ಮಯ್ಯ ಅವರು ಹೇಳಿದ್ದಾರೆ. ಆದರೆ ತಾವು ವೈಯಕ್ತಿಕವಾಗಿ ಹಣ ಸಂಗ್ರಹಿಸಿಲ್ಲ ಎಂದು ಕುಟುಂಬದ ಪ್ರಮುಖರಾದ ಎ.ಕೆ. ಮನು ಮುತ್ತಪ್ಪ ಸ್ಪಷ್ಟೀಕರಣ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಬಂದ ಈ ಆರೋಪವನ್ನು ಅವರು ನಿರಾಕರಿಸಿದ್ದು, ಪೊನ್ನಣ್ಣ ಅವರು ಹಾಕಿ ಉತ್ಸವಕ್ಕೆ ಎಂದು ಕುಟುಂಬಸ್ಥರಿಗೆ ರೂ. ೩ ಲಕ್ಷ ಹಣ ಸಹಾಯ ಮಾಡಿದ್ದಾರೆ. ಇದು ಉತ್ಸವ ಸಮಿತಿಗೆ ಬಂದ ಹಣವಾಗಿದ್ದು, ವೈಯಕ್ತಿಕವಾಗಿ ತಮಗೆ ನೀಡಿದ್ದಲ್ಲ ಎಂದು ಅವರು ವಿವರಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ತಾನು ವೈಯಕ್ತಿಕವಾಗಿ ಪೊನ್ನಣ್ಣ ಅವರಿಂದ ಹಣ ಪಡೆದಿಲ್ಲ ಎಂದು ಹೇಳಿದ್ದೇನೆಯೇ ಹೊರತು ಹಾಕಿ ಉತ್ಸವಕ್ಕೆ ಅವರ ನೆರವು ಪಡೆದಿಲ್ಲ ಎಂದು ಹೇಳಿಲ್ಲ; ಈ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಾರದು ಹಾಗೂ ಉತ್ಸವಕ್ಕೆ ಪೊನ್ನಣ್ಣ ಅವರು ನೀಡಿದ ಧನ ಸಹಾಯಕ್ಕೆ ಕಾರ್ಯಕ್ರಮದಲ್ಲಿ ಸೂಕ್ತ ಗೌರವ ನೀಡಲಾಗಿದೆ ಎಂದು ಮನು ಮುತ್ತಪ್ಪ ಹೇಳಿದ್ದಾರೆ. ಈ ಪ್ರಕರಣವನ್ನು ಮುಂದಿಟ್ಟುಕೊAಡು ಹಲವರು ಕುಟುಂಬದ ಒಗ್ಗಟ್ಟನ್ನು ಒಡೆಯಲು ಯತ್ನಿಸಿದ್ದು, ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಮನು ಹೇಳಿದ್ದಾರೆ.