ಮೈಸೂರು, ಮೇ ೭: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ೧೪ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಬಲರಾಮ (೬೭) ಆನೆ ಅನಾರೋಗ್ಯದಿಂದ ಮೃತಪಟ್ಟಿದೆ.

ಬಲರಾಮ ಆನೆ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ೧೪ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ಎಲ್ಲರ ಕಣ್ಮಣಿಯಾಗಿತ್ತು. ಅತ್ಯಂತ ಸೌಮ್ಯ ಸ್ವಭಾವದ ಆನೆ ಬಲರಾಮ ಇತ್ತೀಚೆಗೆ ತೀವ್ರ ಅಸ್ವಸ್ಥಗೊಂಡಿತ್ತು. ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಾ ಬಂದಿತ್ತು. ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ದ ಹಿನ್ನೆಲೆ ಆಹಾರ ಸೇವಿಸಲು, ನೀರು ಕುಡಿಯಲು ಆಗದೇ ತೀವ್ರ ಅಸ್ವಸ್ಥಗೊಂಡಿತ್ತು.

-ಕಾಳಯ್ಯ