ಕುಶಾಲನಗರ, ಮೇ೭: ಕೊಡಗು ಜಿಲ್ಲಾಡಳಿತ, ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ಕೊಡಗು ಶಾಲಾ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ದೀಪದ ನಡಿಗೆ ಮತದಾನದ ಕಡೆಗೆ ಜಾಥಾ ನಡೆಯಿತು.
ಕುಶಾಲನಗರ ಗಣಪತಿ ದೇವಾಲಯ ಬಳಿಯಿಂದ ಆರಂಭಗೊAಡ ಜಾಥಾಕ್ಕೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ. ರಂಗಧಾಮಯ್ಯ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಈ ಸಂದರ್ಭ ಸೋಮವಾರಪೇಟೆ ತಾಲೂಕು ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಟಿ. ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್ ಏನ್ ಮಂಜುನಾಥ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಮಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಫಲ್ಯದ್, ಶಿಕ್ಷಣಾಧಿಕಾರಿ ದೊಡ್ಡೇಗೌಡ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.
ರಾಜ್ಯ ವಿಜ್ಞಾನ ಪರಿಷತ್, ಕುಶಾಲನಗರದ ರೋಟರಿ ಸಂಸ್ಥೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಶ್ರೀ ಶಕ್ತಿ ಸಂಘ ಮತ್ತಿತರ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.