ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಇಬ್ಬರಿಗೆ ಹೆದರುತ್ತಾರೆ. ಒಬ್ಬರು ದೇವರು.. ಮತ್ತೊಬ್ಬರು ಟಿ.ಎನ್. ಶೇಷನ್.

ಈ ಮಾತು ೧೯೯೦ ರ ದಶಕದಲ್ಲಿ ಪ್ರಚಲಿತದಲ್ಲಿತ್ತು. ಹೌದು.. ಟಿ.ಎನ್. ಶೇಷನ್ ಎಂಬ ಕೇರಳ ಮೂಲದ ವ್ಯಕ್ತಿ ರಾಜಕಾರಣಿಗಳಿಗೆ ಅಕ್ಷರಶಃ ಭಯ ಹುಟ್ಟಿಸಿಬಿಟ್ಟಿದ್ದರು. ಬೇಕಾಬಿಟ್ಟಿ ಚುನಾವಣೆ ಎದುರಿಸುತ್ತಿದ್ದ ರಾಜಕಾರಣಿಗಳಿಗೆ ಪ್ರಜಾಪ್ರಭುತ್ವದ ಮೂಲಸೆಲೆಯಾದ ಚುನಾವಣೆಯ ರೀತಿ, ನೀತಿ, ರಿವಾಜುಗಳ ಬಗ್ಗೆ ವಾಸ್ತವ ರೂಪದಲ್ಲಿ ಹೇಳಿಕೊಟ್ಟದ್ದೇ ಶೇಷನ್.

೧೯೯೦ ರವರೆಗೆ ಭಾರತದಲ್ಲಿ ಚುನಾವಣೆಗಳು ನೀತಿನಿಯಮಗಳ ಅಡಿಪಾಯದಲ್ಲಿ ಕಟ್ಟುನಿಟ್ಟಾಗಿ ನಡೆಯುತ್ತಿರಲಿಲ್ಲ. ಚುನಾವಣೆ ಘೋಷಣೆಯಾದ ದಿನದಿಂದ ಅಭ್ಯರ್ಥಿಯೇ ರಾಜನಂತೆ ವರ್ತಿಸುತ್ತಿದ್ದ. ಮತದಾರನ ಮನ ಸೆಳೆಯಲು ಹಣ, ಹೆಂಡ, ಕೊಡುಗೆಗಳು ಮಾತ್ರವಲ್ಲ ದಂಡಸೂತ್ರವನ್ನೂ ಬಳಸುತ್ತಿದ್ದ. ಚುನಾವಣೆ ಎಂದರೆ ರಣರಂಗದAತೆ ಇರುತ್ತಿತ್ತು. ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ಮತದಾನದ ದಿನ ಮತಗಟ್ಟೆಯನ್ನೇ ಕದ್ದೊಯ್ಯಲಾಗುತ್ತಿತ್ತು. ಮತದಾರನನ್ನೇ ಮತದಾನ ಕೇಂದ್ರಕ್ಕೆ ಬಾರದಂತೆ ತಡೆದು ಯಾರದ್ದೋ ಹೆಸರಿನಲ್ಲಿ ಯಾರೋ ಮತ ಹಾಕಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತಿದ್ದರು. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಬಂದೂಕು ನಳಿಕೆಯ ಬೆದರಿಕೆಯಿಂದಲೇ ಮತದಾನ ನಡೆದ ಉದಾಹರಣೆಗಳಿರುತ್ತಿತ್ತು.

ಹಣ ವೆಚ್ಚಕ್ಕೆ ಇತಿಮಿತಿಯೇ ಇರುತ್ತಿರಲಿಲ್ಲ. ಮತದಾರನಿಗೆ ಹಣ ನೀಡಿ ಮತ ಖರೀದಿಸಲಾಗುತ್ತಿತ್ತು. ಚುನಾವಣೆ ಪ್ರಚಾರಕ್ಕೂ ಇತಿಮಿತಿಯೇ ಇರುತ್ತಿರಲಿಲ್ಲ. ಕಂಡಕAಡವರ ಮನೆ ಗೋಡೆ ಮೇಲೆ ಚುನಾವಣಾ ಪ್ರಚಾರ ಬರಹ ಕಂಡುಬರುತ್ತಿತ್ತು. ರಸ್ತೆ ಮೇಲೆಯೇ ಬಣ್ಣಬಣ್ಣದ ಪ್ರಚಾರ ಬರಹಗಳಿರುತ್ತಿತ್ತು.

ಬ್ಯಾನರ್, ಧ್ವಜಗಳು ಎಲ್ಲೆಲ್ಲೂ ರಾರಾಜಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದರೆ, ಮೈಕಾಸುರನ ಅಬ್ಬರದಿಂದಾಗಿ ಚುನಾವಣೆಯ ದಿನಗಳಲ್ಲಿ ಶಬ್ದಮಾಲಿನ್ಯ ಬಹುತೇಕ ಕಡೆ ಕೇಳಿಬರುತ್ತಿತ್ತು.

ಅನೇಕ ಸಭ್ಯಸ್ಥರ ಪಾಲಿಗೆ ಚುನಾವಣೆ ಎಂದರೆ ಅಸಹ್ಯ ಭಾವನೆ ಮೂಡುತ್ತಿದ್ದ ದಿನಗಳವು. ಹಣ ಇದ್ದವನು, ಹಣ ತೆತ್ತವನು ಸುಲಭವಾಗಿ ಚುನಾವಣೆಯಲ್ಲಿ ಗೆಲ್ಲಬಲ್ಲ ಎಂಬ ಭಾವನೆಗೆ ಕಾರಣವಾಗುತ್ತಿದ್ದ ದಿನಗಳು ಅವು. ಮತದಾರ ಹೆದರಿಕೆಯಿಂದ, ಭಯದಿಂದ ಮತದಾನ ಮಾಡಲು ಮತಗಟ್ಟೆಗೆ ತೆರಳಬೇಕಾದ ದಿನಗಳು ಅವು. ಮತದಾರನಿಗೆ ಬೆಲೆಯೇ ಇಲ್ಲದ ದಿನಗಳು ೧೯೯೦ ರವರೆಗೆ ಇತ್ತು.

ಇಂಥಹ ಸಂದರ್ಭದಲ್ಲಿಯೇ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದವರು ತಿರುನೆಲ್ಲಿ ನಾರಾಯಣ ಅಯ್ಯರ್ ಶೇಷನ್. ಇವರ ನೇಮಕದಲ್ಲಿ ಅಂದಿನ ಪ್ರಭಾವೀ ರಾಜಕಾರಣಿ ಸುಬ್ರಮಣ್ಯ ಸ್ವಾಮಿ ಅವರ ಪ್ರಭಾವ ಇತ್ತು. ಟಿ.ಎನ್. ಶೇಷನ್ ೬ ವರ್ಷಗಳ ಕಾಲ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದರು. ಆದರೆ ಈ ಅಲ್ಪಾವಧಿಯಲ್ಲಿಯೇ ಟಿ.ಎನ್. ಶೇಷನ್ ಭಾರತದ ಚುನಾವಣಾ ವ್ಯವಸ್ಥೆಗೆ ತಂದ ಬದಲಾವಣೆ ಮಾತ್ರ ಜಗತ್ತಿನಲ್ಲಿಯೇ ಕ್ರಾಂತಿಕಾರಿ ಬದಲಾವಣೆ ಎನಿಸಿಕೊಂಡಿತು. ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಶೇಷನ್ ಭಾರತದ ಚುನಾವಣಾ ವ್ಯವಸ್ಥೆಗಳ ಬಗ್ಗೆ ಆಮೂಲಾಗ್ರ ಮಾಹಿತಿ ಪಡೆದುಕೊಂಡರು. ಎಲ್ಲೆಲ್ಲಿ ಹೇಗೆಲ್ಲಾ ಅಕ್ರಮಗಳು ನಡೆಯುತ್ತದೆ ಎಂದು ಅರಿತುಕೊಂಡರು.

ಆನAತರವೇ ಆರಂಭವಾದದ್ದು ಶೇಷನ್ ಅವರ ಚುನಾವಣಾ ಪ್ರಕ್ರಿಯೆಯ ಸ್ವಚ್ಛತಾ ಕಾರ್ಯ...

ಮತದಾರನಿಗೆ ಫೋಟೋ ಹೊಂದಿರುವ ಮತದಾರನ ಗುರುತಿನ ಚೀಟಿ ಕಡ್ಡಾಯಗೊಳಿಸಲಾಯಿತು. ಯಾರಿಗೆ ಮತದಾನದ ಗುರುತಿನ ಚೀಟಿ ಇರುವುದಿಲ್ಲವೋ ಅಂಥವರು ಮತದಾನ ಮಾಡಲು ಸಾಧ್ಯವಿಲ್ಲ ಎಂಬ ನಿಯಮ ಜಾರಿಗೆ ಬಂತು. ಇದರಿಂದಾಗಿ ಅಕ್ರಮವಾಗಿ ಬೇರೆಯವರ ಹೆಸರಿನಲ್ಲಿ ಮತಹಾಕುವ ದಂಧೆಗೆ ಕಡಿವಾಣ ಬಿತ್ತು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಇಂತಿಷ್ಟೇ ಹಣ ಚುನಾವಣೆಗೆ ವೆಚ್ಚ ಮಾಡಬೇಕೆಂಬ ಕಠಿಣ ನಿಯಮ ಜಾರಿಯಾಯಿತು. ಇದರಿಂದಾಗಿ ಗೆಲವು ಸಾಧಿಸಲು ಕೋಟಿಗಟ್ಟಲೆ ವೆಚ್ಚ ಮಾಡುತ್ತಿದ್ದ ಅಭ್ಯರ್ಥಿ ಹಣ ಬಲಕ್ಕಿಂತ ತನ್ನ ಬುದ್ಧಿ ಸಾಮರ್ಥ್ಯ, ಜನ ಬೆಂಬಲದ ಆಧಾರದ ಮೇಲೆ ಚುನಾವಣೆಯಲ್ಲಿ ಜಯ ಸಾಧಿಸಬೇಕಾದ ಅನಿವಾರ್ಯತೆ ಎದುರಾಯಿತು.

೪೦ ಲಕ್ಷ ರೂಪಾಯಿ ಚುನಾವಣಾ ವೆಚ್ಚ ಎಂದು ನಿಗದಿಗೊಳಿಸಿದರೆ ಅಷ್ಟೂ ಹಣಕ್ಕೆ ಕರಾರುವಕ್ಕಾದ ಲೆಕ್ಕದ ದಾಖಲೆ ತೋರಿಸಬೇಕಾಗಿತ್ತು. ಮಿತಿ ಮೀರಿದರೆ ಅಥವಾ ಅಕ್ರಮ ದಾಖಲೆ ನೀಡಿದ್ದೇ ಆದಲ್ಲಿ ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹ ಎಂಬ ನಿಯಮ ಜಾರಿಗೆ ಬಂತು. ಅಭ್ಯರ್ಥಿಗಳು ಅಕ್ಷರಶಃ ಬೆವರಿ ಹೋದರು.

ಅಬ್ಬರದ ಪ್ರಚಾರಕ್ಕೆ ಬಹುತೇಕ ಕಡಿವಾಣ ತರಲಾಯಿತು. ಬೇಕಾಬಿಟ್ಟಿ ಹೊತ್ತಲ್ಲದ ಹೊತ್ತಿನಲ್ಲಿ ಪ್ರಚಾರ ಕೈಗೊಳ್ಳುವಂತಿಲ್ಲ ಎಂಬ ನಿಯಮವೂ ಜನರ ನೆಮ್ಮದಿಗೆ ಕಾರಣವಾಯಿತು. ಏನೇ ಮಾಡಿ ಚುನಾವಣಾ ಆಯೋಗ ಅಥವಾ ಜಿಲ್ಲಾಡಳಿತದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂಬ ಕಾನೂನು ಜಾರಿಗೆ ಬಂತು.

ಚುನಾವಣೆ ನಡೆಸುವ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಚುನಾವಣಾ ದಿನಗಳಲ್ಲಿ ಸರ್ವೋಚ್ಚ ಅಧಿಕಾರ ನೀಡಲಾಯಿತು. ಹೀಗಾಗಿ ಅಧಿಕಾರಿ ವರ್ಗ ಅಭ್ಯರ್ಥಿಗಳು, ಬೆಂಬಲಿಗರ ಮೇಲೆ ಹದ್ದಿನಗಣ್ಣಿಟ್ಟರು. ಅಕ್ರಮಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಟೊಂಕಕಟ್ಟಿ ನಿಂತರು.

ಮೈಕ್‌ಗಳಿಗೂ ಅನುಮತಿ, ಬ್ಯಾನರ್, ಫ್ಲೆಕ್ಸ್ಗಳಿಗೂ ಇಲ್ಲ ವಿನಾಯಿತಿ, ಹಣ ಹಂಚಿಕೆಗೆ ಇಲ್ಲ ಅವಕಾಶ. ಹೆಂಡ ವಿತರಣೆಗೆ ಕೂಡ ದೊರಕದ ವಿನಾಯಿತಿ, ಕಾರ್ಯಕ್ರಮಗಳಲ್ಲಿ ಊಟ ನೀಡಿಕೆಗೂ ನಿರ್ಬಂಧ, ಧಾರ್ಮಿಕ ಸ್ಥಳಗಳಲ್ಲಿಯೂ ವಿಧ ವಿಧ ರೀತಿ ನಡೆಯುತ್ತಿದ್ದ ಪ್ರಚಾರಕ್ಕೂ ಕಡಿವಾಣ..

ಹೀಗೆ ಒಂದಲ್ಲ.. ಎರಡಲ್ಲ.. ಅನೇಕ ರೀತಿಯ ಸುಧಾರಣಾ ನಿಯಮಗಳ ಮೂಲಕ ಚುನಾವಣೆಗೆ ಒಂದು ವ್ಯವಸ್ಥಿತ ರೂಪು ನೀಡಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯನ್ನು ಸುಗಮವಾಗಿ ನಡೆಸಲು ಚುನಾವಣಾ ನೀತಿಸಂಹಿತೆಯನ್ನೂ ಶೇಷನ್ ಜಾರಿಗೊಳಿಸಿದರು. ನೀತಿ ಸಂಹಿತೆಯನ್ನು ಮೀರಿದವರಿಗೆ ಕಠಿಣ ಕಾನೂನಿನ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಲಾಯಿತು. ಯಾವಾಗ ಪ್ರಚಾರ ಮುಕ್ತಾಯಗೊಳಿಸಬೇಕು. ಯಾವಾಗ ಅಭ್ಯರ್ಥಿ ಲೆಕ್ಕಪತ್ರದ ದಾಖಲೆ ನೀಡಬೇಕು. ಮಾಧ್ಯಮಗಳಲ್ಲಿ ಯಾವ ರೀತಿ ಅನುಮತಿ ಪಡೆದು ಪ್ರಚಾರ ನಡೆಸಬೇಕು ಎಂಬುದೂ ಸೇರಿದಂತೆ ೧೦೦ಕ್ಕೂ ಅಧಿಕ ಹೊಸ ನಿಯಮಗಳು ನೀತಿ ಸಂಹಿತೆಯಡಿ ಜಾರಿಯಾದವು.

ಚುನಾವಣಾ ಆಯೋಗ ಎಂಬುದು ಹಲ್ಲಿಲ್ಲದ ಹಾವು ಇದ್ದಂತೆ ಎಂದು ಭಾವಿಸಿದ್ದ ರಾಜಕಾರಣಿಗಳಿಗೆ ಚುನಾವಣಾ ಆಯೋಗದ ನಿಜವಾದ ಶಕ್ತಿಯನ್ನು ತೋರಿಸಿಕೊಡಲಾಯಿತು. ೧೯೯೨ ರಲ್ಲಿ ಬಿಹಾರ ಮತ್ತು ಪಂಜಾಬ್‌ನಲ್ಲಿ ಚುನಾವಣಾ ಆಯೋಗದ ನೀತಿನಿಯಮಗಳನ್ನು ಬಹುತೇಕ ಅಭ್ಯರ್ಥಿಗಳು ಪಾಲಿಸಲು ವಿಫಲರಾಗಿ ಆಯೋಗಕ್ಕೆ ಸೆಡ್ಡು ಹೊಡೆದ ಸಂದರ್ಭ ಆಯೋಗವು ಎರಡೂ ರಾಜ್ಯಗಳಲ್ಲಿ ಕೆಲ ತಿಂಗಳು ಚುನಾವಣೆಯನ್ನೇ ಮುಂದೂಡಿತು. ಕೊನೆಗೆ ರಾಜಕಾರಣಿಗಳು ದಾರಿಗೆ ಬಂದ ಬಳಿಕವೇ ಅಲ್ಲಿ ಶಾಂತಿಯುತ ಚುನಾವಣೆ ನಡೆಯುವಂತಾಯಿತು.

ಪ್ರಜಾಪ್ರಭುತ್ವದಲ್ಲಿ ತಮ್ಮನ್ನು ಆಳುವ ಅಧಿಕಾರಸ್ಥರನ್ನು ಆಯ್ಕೆ ಮಾಡುವ ಅತ್ಯಮೂಲ್ಯ ಪ್ರಕ್ರಿಯೆಯಾದ ಚುನಾವಣೆ ಎಂಬುದು ಹೇಗೆ ನಡೆಯಬೇಕೆಂಬುದನ್ನು ಟಿ.ಎನ್. ಶೇಷನ್ ತೋರಿಸಿಕೊಟ್ಟರು. ಚುನಾವಣೆ ಸಂದರ್ಭದಲ್ಲಿ ಸರ್ಕಾರ ಅಲ್ಲ ಚುನಾವಣಾ ಆಯೋಗವೇ ಶಕ್ತಿಶಾಲಿ ಎಂಬುದನ್ನು ನಿರೂಪಿಸಿದರು.

ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್, ಸೇನಾ ಭದ್ರತೆ ನಿಯೋಜಿಸಿ ಪುಂಡರಿಗೆ ತಕ್ಕ ಪಾಠ ಕಲಿಸಿ ಶಾಂತಯುತವಾಗಿ ಮತದಾನ ನಡೆಸಲು ಸಾಧ್ಯ ಎಂಬುದನ್ನೂ ಶೇಷನ್ ತೋರಿಸಿದರು. ಈ ಮೂಲಕ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಗೊಂದಲ, ಗದ್ದಲಗಳಿಗೆ ಆಸ್ಪದ ಇಲ್ಲದಂತೆ ಚುನಾವಣೆಯ ಮೂಲಕ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು ಎಂಬುದನ್ನು ಕಾನೂನಿನ ಮೂಲಕವೇ ಟಿ.ಎನ್. ಶೇಷನ್ ಸಾಬೀತುಪಡಿಸಿದರು.

೧೯೯೬ ರಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತರಾಗುವ ಸಂದರ್ಭ ಟಿ.ಎನ್. ಶೇಷನ್ ಪಬ್ಲಿಕ್ ಹೀರೋ ಆಗಿದ್ದರು. ಭಾರತಾದ್ಯಂತ ಟಿ.ಎನ್. ಶೇಷನ್ ಎಂಬ ಹೀರೋ ಬಗ್ಗೆ ಜನರಿಗೆ ತಿಳಿದಿತ್ತು. ಚುನಾವಣಾ ಆಯೋಗದಲ್ಲಿ ತಂದ ಪರಿವರ್ತನೆಗಳಿಗಾಗಿ ಶೇಷನ್ ಅವರಿಗೆ ಪ್ರತಿಷ್ಠಿತ ಮ್ಯಾಗ್ಸಸೇ ಪ್ರಶಸ್ತಿ ಲಭಿಸಿತ್ತು.

ರಾಜಕಾರಣಿಗಳಿಗೆ ಎಂದೂ ತಲೆಭಾಗದ ಟಿ.ಎನ್. ಶೇಷನ್ ನಿವೃತ್ತಿಯ ನಂತರ ರಾಜಕಾರಣದ ಗೀಳು ಅಂಟಿಸಿಕೊAಡರು. ರಾಜೀವ್‌ಗಾಂಧಿ ಬಗ್ಗೆ ವಿಶೇಷ ಒಲವನ್ನು ಶೇಷನ್ ಬೆಳೆಸಿಕೊಂಡರು. ಇಡೀ ಚುನಾವಣಾ ಪ್ರಕ್ರಿಯೆಗೆ ಕ್ರಾಂತಿಕಾರಿ ಬದಲಾವಣೆ ತಂದಿದ್ದ ಶೇಷನ್ ೧೯೯೭ರಲ್ಲಿ ರಾಷ್ಟçಪತಿ ಚುನಾವಣೆಗೆ ಸ್ಪರ್ಧಿಸಿ ಕೆ.ಆರ್. ನಾರಾಯಣ್ ವಿರುದ್ಧ ಸೋಲು ಕಂಡದ್ದು ವಿಪರ್ಯಾಸ. ೧೯೯೯ರಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಗಾಂಧಿ ನಗರದಿಂದ ಎಲ್.ಕೆ. ಅಡ್ವಾನಿ ವಿರುದ್ಧ ಸೋಲು ಕಂಡರು. ಚೆನ್ನೆöÊನಲ್ಲಿ ನಿವೃತ್ತಿ ಜೀವನ ಕಳೆದ ಶೇಷನ್ ೨೦೧೯ ನವೆಂಬರ್ ೧೦ ರಂದು ನಿಧನರಾದರು.

ಚುನಾವಣಾ ಆಯೋಗದ ಮುಖ್ಯಸ್ಥರು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇದ್ದಾರೆ. ಆದರೆ ಶೇಷನ್ ಅಳವಡಿಸಿ ಮಾದರಿಯಾಗಿದ್ದ ನಿಯಮಗಳು ಮಾತ್ರ ಹಾಗೇ ಮುಂದುವರೆದಿದೆ. ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿದ್ದ ತೊಡಕುಗಳನ್ನು ಶುಚಿಗೊಳಿಸಿ ಚುನಾವಣೆಗೆ ಪಾರದರ್ಶಕ ಸ್ಪರ್ಶ ನೀಡಿದ್ದ ಟಿ.ಎನ್. ಶೇಷನ್ ಪ್ರತೀ ಚುನಾವಣೆಯಲ್ಲಿಯೂ ನೆನಪಾಗುತ್ತಲೇ ಇರುತ್ತಾರೆ... ತಾವು ಜಾರಿಗೆ ತಂದ ನಿಯಮಗಳ ಮೂಲಕ..!! - ಅನಿಲ್ ಎಚ್.ಟಿ.