ಮಡಿಕೇರಿ, ಮೇ ೭: ಕೇಂದ್ರ ಹಾಗೂ ರಾಜ್ಯ ಸರ್ಕಾರ ದುಡಿಯುವ ವರ್ಗವನ್ನು ನಿರ್ಲಕ್ಷಿö್ಯಸುತ್ತಲೇ ಬರುತ್ತಿರುವುದರಿಂದ ನೊಂದವರ ಧ್ವನಿಯಾಗಿ ಹೋರಾಟ ನಡೆಸಲು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದಾಗಿ ಅಭ್ಯರ್ಥಿ ಹೆಚ್.ಎಂ. ಸೋಮಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೦ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಿಪಿಐ ಮತ್ತು ಎಐಟಿಯುಸಿ ಸಂಘಟನೆ ಜಂಟಿಯಾಗಿ ದುಡಿಯುವ ವರ್ಗದ ಪರ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಕಾರ್ಮಿಕ ವರ್ಗ ನಿತ್ಯ ಅನುಭವಿಸುತ್ತಿರುವ ಸಂಕಷ್ಟ, ರೈತರ ಸಮಸ್ಯೆಗಳು, ವನ್ಯ ಜೀವಿ ದಾಳಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದೆ ಎಂದು ವಿವರಿಸಿದರು.
ಸೂರಿಲ್ಲದವರಿಗೆ ಸೂರು ಕಲ್ಪಿಸುವುದಕ್ಕಾಗಿ “ಸೂರಿಗಾಗಿ ಸಮರ” ಘೋಷ ವಾಕ್ಯದೊಂದಿಗೆ ಬೃಹತ್ ಹೋರಾಟವನ್ನು ನಡೆಸಲಾಗಿತ್ತು. ಆದರೆ ಆಡಳಿತ ನಡೆಸುವವರಿಂದ ಕೇವಲ ಭರವಸೆ ಮಾತ್ರ ದೊರೆಯಿತೇ ಹೊರತು ಇಲ್ಲಿಯವರೆಗೆ ನಿವೇಶನ ರಹಿತರಿಗೆ ಸೂರು ಸಿಕ್ಕಿಲ್ಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಕಾರ್ಯದರ್ಶಿ ಹೆಚ್.ಎಂ. ಶಬಾನ ಹಾಗೂ ಎಐಟಿಯುಸಿ ಕಾರ್ಯದರ್ಶಿ ಪಿ.ಟಿ. ಸುಂದರ ಉಪಸ್ಥಿತರಿದ್ದರು.