ಮಡಿಕೇರಿ, ಮೇ. ೬: ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಝೀ ಕನ್ನಡ ವಾಹಿನಿ ನಡೆಸಿಕೊಡುತ್ತಿರುವ ಡ್ಯಾನ್ಸ್ ಕನ್ನಡ ಡ್ಯಾನ್ಸ್ -ಸೀಸನ್ ೭ಗೆ ಕೊಡಗಿನ ಪ್ರತಿಭೆ ಎಂ.ಆರ್.ಲಿಪಿಕ ಆಯ್ಕೆಯಾಗಿದ್ದಾಳೆ.

ಬೆಂಗಳೂರಿನಲ್ಲಿ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಡಾ.ಶಿವರಾಜ್‌ಕುಮಾರ್, ವಿಜಯ್ ರಾಘವೇಂದ್ರ, ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯ ಅವರುಗಳ ಸಮ್ಮುಖದಲ್ಲಿ ನಡೆದ ಮೆಗಾ ಆಡಿಶನ್‌ನಲ್ಲಿ ಲಿಪಿಕ ಆಯ್ಕೆಯಾಗಿದ್ದಾಳೆ. ತಾ.೭ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಶೋ ಪ್ರದರ್ಶನಗೊಳ್ಳಲಿದ್ದು, ಕರ್ನಾಟಕ ರತ್ನ, ಡಾ. ಪುನಿತ್ ರಾಜ್‌ಕುಮಾರ್ ಪದಕÀಕ್ಕಾಗಿ ಸ್ಪರ್ಧೆ ನಡೆಯಲಿದೆ.

ಮಡಿಕೇರಿ ನಿವಾಸಿ ರಾಜೇಶ್ ಹಾಗೂ ಸಂಧ್ಯ ಅವರ ಪುತ್ರಿಯಾಗಿರುವ ಲಿಪಿಕ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಪ್ರಥಮ ಬಿ ಕಾಂ ವಿದ್ಯಾರ್ಥಿನಿಯಾಗಿದ್ದು, ಮಡಿಕೇರಿಯ ಡ್ಯಾನ್ಸ್ ಲ್ಯಾಬ್‌ನ ನೃತ್ಯ ತರಬೇತುದಾರರಾದ ವಿಶ್ವ ಹಾಗೂ ಪ್ರಜ್ವಲ್ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.

ಈ ಹಿಂದೆ ಜಿಲ್ಲೆಯಿಂದ ಡಿಕೆಡಿಗೆ ಆಯ್ಕೆಯಾಗಿದ್ದ ಮೂರ್ನಾಡುವಿನ ರಾಹುಲ್ ರಾವ್ ವಿನ್ನರ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹಾಗೆಯೇ ಮತ್ತೊಂದು ರಿಯಾಲಿಟಿ ಶೋ ಸರಿಗಮಪ ಲಿಟ್ಲ್ ಚಾಂಪ್ಸ್ನಲ್ಲಿ ಭಾಗವಹಿಸಿದ್ದ ಕುಶಾಲನಗರ ಬಳಿಯ ಪ್ರಕೃತಿ ಬಡಿಗೇರ್ ಕೂಡ ಪ್ರಥಮ ಬಹುಮಾನ ಪಡೆದುಕೊಂಡಿದ್ದಾಳೆ.