ಮಡಿಕೇರಿ, ಮೇ ೭: ಇಪತ್ತೆöÊದು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಬಿಜೆಪಿಯ ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ ಒಳಗೊಂಡ ಪ್ರಣಾಳಿಕೆ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ವಕ್ತಾರ ತೆನ್ನೀರಾ ಮೈನಾ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಗ್ರೇಟರ್ ರಾಜಾಸೀಟ್‌ನಲ್ಲೇ ಹಣ ದುರುಪಯೋಗವಾಗಿದ್ದು, ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ, ಸುವರ್ಣ ಸಮುಚ್ಚಯ ಭವನ ಸೇರಿದಂತೆ ಸಾಕಷ್ಟು ಕೆಲಸಗಳು ಬಾಕಿ ಉಳಿದುಕೊಂಡಿವೆ. ಹೀಗಿರುವಾಗ ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ ಮಾಡುವುದಾಗಿ ಶಾಸಕರು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದು ಕುಟುಕಿದರು.

ಕಾಂಗ್ರೆಸ್ ವೃತ್ತಿಪರ ಘಟಕದ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ರೂಪಿಸಿದ್ದು, ಅಭ್ಯರ್ಥಿ ಮಂಥರ್‌ಗೌಡ ಜಯಗಳಿಸಿದರೆ, ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದರು. ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಮಡಿಕೇರಿ ಕ್ಷೇತ್ರಕ್ಕೆ ಶಾಸಕರ ಕೊಡುಗೆ ಶೂನ್ಯವಾಗಿದ್ದು, ನಗರಸಭೆಯಲ್ಲಿ ಕೆಲ ದಿನಗಳ ಹಿಂದೆ ವಿಹೆಚ್‌ಪಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಆದರೆ ಈ ಆರೋಪಿಗಳನ್ನು ಜಿಲ್ಲಾ ಪೊಲೀಸರು ಇನ್ನೂ ಏಕೆ ಪತ್ತೆ ಹಚ್ಚಿಲ್ಲ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಮೈನಾ, ಪೊಲೀಸ್ ಇಲಾಖೆ ಈ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆ ನೀಡುವುದರೊಂದಿಗೆ ಕೃಷ್ಣಮೂರ್ತಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಮಾತನಾಡಿ, ಕೊಡಗಿಗೆ ಈ ಬಾರಿಯ ಚುನಾವಣೆ ಅತೀ ಮಹತ್ವದಿಂದ ಕೂಡಿದ್ದು, ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು. ಕೆಪಿಸಿಸಿ ಸದಸ್ಯ ಯಾಕೂಬ್, ಡಿಸಿಸಿ ಸದಸ್ಯ ಪ್ರಕಾಶ್ ಆಚಾರ್ಯ, ಪಕ್ಷದ ಮುಖಂಡ ಅಕ್ಬರ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.