ಗೋಣಿಕೊಪ್ಪಲು, ಮೇ ೭: ರಾಜ್ಯ ಅರಣ್ಯ ನಿಗಮದ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ನಲ್ಲಿದ್ದ ಪದ್ಮಿನಿ ೨೦೧೮ರಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಶಾಸಕ ಕೆ.ಜಿ. ಬೋಪಯ್ಯ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಗೋಣಿಕೊಪ್ಪ ಬಿಜೆಪಿ ಕಚೇರಿಯಲ್ಲಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಕ್ಷೇತ್ರದ ಉದ್ದಗಲಕ್ಕೂ ಹಲವಾರು ಮಂದಿ ವಿವಿಧ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಗೆಲುವಿಗೆ ಅವಕಾಶ ಹೆಚ್ಚಾಗಿದೆ ಎಂದರು.

ಪದ್ಮಿನಿ ಪೊನ್ನಪ್ಪ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸಾಧನೆ ನೋಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವೆ, ಉತ್ತಮ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಕಾಡ್ಯಮಾಡ ಗಿರೀಶ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ಅಜ್ಜಿಕುಟ್ಟೀರ ಪ್ರವೀಣ್, ವಾಟೇರಿರ ಬೋಪಣ್ಣ, ಚೆಪ್ಪುಡೀರ ಮಾಚು, ಮಾಚಿಮಾಡ ರವೀಂದ್ರ, ಚೋಡುಮಾಡ ಶ್ಯಾಮ್ ಪೂಣಚ್ಚ, ಮೂಕೊಂಡ ಶಶಿ ಸುಬ್ರಮಣಿ, ಬಿ.ಎನ್. ಪ್ರಕಾಶ್, ಕದ್ದಣಿಯಂಡ ಹರೀಶ್ ಬೋಪಣ್ಣ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.