ಸಿದ್ದಾಪುರ, ಮೇ ೫: ಮಾಲ್ದಾರೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಗ್ರಾಮದ ಬಾಡಗಬಾಣಂಗಾಲ ಮೈಲಾದಪುರ, ಹುಂಡಿ, ಮಟ್ಟಂ, ಘಟ್ಟದಳ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಕಾಫಿ ತೋಟದೊಳಗೆ ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಹಾಡಹಗಲೇ ಕಾಡಾನೆಗಳು ರಾಜಾರೋಷವಾಗಿ ಸುತ್ತಾಡುತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಫಿ ತೋಟದೊಳಗೆ ಕಾರ್ಯಾಚರಣೆ ನಡೆಸಿ ಕಾಫಿ ತೋಟದೊಳಗೆ ಇದ್ದ ಮರಿಯಾನೆಗಳು ಸೇರಿದಂತೆ ೧೨ಕ್ಕೂ ಅಧಿಕ ಕಾಡಾನೆಗಳನ್ನು ಮಾಲ್ದಾರೆಯ ಅರಣ್ಯಕ್ಕೆ ಅಟ್ಟಿದರು. ಇದೀಗ ಕಾಫಿ ತೋಟಗಳಿಗೆ ಆಹಾರವನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಕಾಡಾನೆಗಳ ಹಿಂಡು ಲಗ್ಗೆ ಇಡುತ್ತಿವೆ. ಇದರಿಂದ ಕಾಫಿ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಮತ್ತೆ ಆತಂಕ ಮನೆ ಮಾಡಿದೆ. ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಇಲ್ಲಿಯ ಕಾಫಿ ಬೆಳೆಗಾರರ ಮನೆಯ ಅಂಗಳದಲ್ಲಿ ರಾತ್ರಿ ಕಾಡಾನೆಗಳು ಓಡಾಡುತ್ತಿರುವುದು ಬೆಳೆಗಾರರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಬೆಳೆಗಾರರು ಒತ್ತಾಯಿಸಿದರು.