ವೀರಾಜಪೇಟೆ, ಮೇ ೫: ಹಾಕಿ, ಕ್ರಿಕೆಟ್ ಹಾಗೂ ಫುಟ್‌ಬಾಲ್ ಕ್ರೀಡೆಯಲ್ಲಿ ಯುವಜನತೆ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದ ಕೊಡವ ಕುಟುಂಬಗಳ ನಡುವೆ ಪ್ರಥಮವಾಗಿ ಕೌಟುಂಬಿಕ ಫೈವ್-ಎ-ಸೈಡ್ ಫುಟ್ಬಾಲ್ ಪಂದ್ಯಾವಳಿಯನ್ನು ದೇವಣಗೇರಿ ಮೂಕೊಂಡ ಕುಟುಂಬದ ವತಿಯಿಂದ ತಾ. ೨೨ರಿಂದ ೨೪ ರವರೆಗೆ ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕುಟುಂಬದ ಅಧ್ಯಕ್ಷ ರಾಜ ಬೋಪಣ್ಣ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳು ಫುಟ್ಬಾಲ್ ಪಂದ್ಯಾಟಗಳನ್ನು ನಡೆಸುತ್ತಿವೆ. ಆದರೆ ಕೊಡವ ಕುಟುಂಬಗಳ ನಡುವೆ ಇದೇ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದರು.

ಮೂಕೊAಡ ಶಶಿ ಸುಬ್ರಮಣಿ ಮಾತನಾಡಿ, ಪಂದ್ಯಾಟದಲ್ಲಿ ಭಾಗವಹಿಸುವ ಪ್ರತಿ ಕುಟುಂಬವು ಏಳು ಆಟಗಾರರನ್ನು ಹೊಂದಿರಬೇಕು. ಅದರಲ್ಲಿ ಬೇರೆ ಕೊಡವ ಕುಟುಂಬದ ೨ ಅತಿಥಿ ಆಟಗಾರರಿಗೆ ಆಡಲು ಅವಕಾಶ ಇರಲಿದೆ. ಪಂದ್ಯಾಟದಲ್ಲಿ ಕುಟುಂಬದ ಹೆಸರು ನೊಂದಾಯಿಸಲು ತಾ. ೧೫ ಕೊನೆಯ ದಿನವಾಗಿದೆ. ಮೊದಲು ನೊಂದಾಯಿಸುವ ೩೨ ತಂಡಗಳಿಗೆ ಅವಕಾಶ ನೀಡಲಾಗುವುದು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಅಂತಿಮ ಪಂದ್ಯ ತಾ. ೨೪ ರಂದು ನಡೆಯಲಿದ್ದು ವಿಜೇತರಿಗೆ ನಗದು ಹಾಗು ಆಕರ್ಷಕ ಟ್ರೋಫಿ ನೀಡಲಾಗುವುದು. ಪಂದ್ಯಾಟದಲ್ಲಿ ಉತ್ತಮ ಗೋಲ್‌ಕೀಪರ್, ಉತ್ತಮ ಮುನ್ನಡೆ ಆಟಗಾರ, ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರರಿಗೆ ಟ್ರೋಫಿ ನೀಡಲಾಗುವುದು. ೮೨೭೭೬೨೭೮೫೩ ಮಿತೇಶ್, ೯೬೬೩೭೫೩೫೫೫ ಭೌಶಿಕ್ ಇವರುಗಳಲ್ಲಿ ತಂಡದ ಹೆಸರನ್ನು ನೋದಾಯಿಸಿಕೊಳ್ಳಬಹುದು ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಮೂಕೊಂಡ ಮಂಜು, ಖಜಾಂಚಿ ಮೂಕೊಂಡ ಉಮೇಶ್ ಉಪಸ್ಥಿತರಿದ್ದರು.