ಸಿದ್ದಾಪುರ, ಮೇ ೫ : ಕಸ ವಿಲೇವಾರಿ ಮಾಡುವಂತೆ ಮನವಿ ಮಾಡಿದ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರಿಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಾರ್ವಜನಿಕವಾಗಿ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಮಹಿಳಾ ಸದಸ್ಯರು ಆರೋಪಿಸಿದ್ದಾರೆ.
ಸಿದ್ದಾಪುರದಲ್ಲಿ ಸಂಗ್ರಹಿಸುತ್ತಿರುವ ಕಸವನ್ನು ಮಾರುಕಟ್ಟೆ ಆವರಣದಲ್ಲಿ ಶೇಖರಿಸುತ್ತಿದ್ದು ಇಡೀ ಪರಿಸರವು ಗಬ್ಬೆದು ನಾರುತ್ತಾ ಸುತ್ತಮುತ್ತಲ ಪ್ರದೇಶ ಅಶುಚಿತ್ವದಿಂದ ಕೂಡಿದೆ. ಪುನಃ ಅಲ್ಲಿ ಕಸ ಹಾಕಲು ವಿರೋಧ ವ್ಯಕ್ತಪಡಿಸಿದ ವಾರ್ಡಿನ ಮಹಿಳಾ ಸದಸ್ಯರಾದ ಪ್ರೇಮ ಮತ್ತು ಜಮೀರಾ ಸ್ಥಳಕ್ಕೆ ಬಂದ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣನವರ ಬಳಿ ಕಸ ತೆರವುಗೊಳಿಸುವಂತೆ ಮನವಿ ಮಾಡಿದಾಗ ಮಹಿಳಾ ಸದಸ್ಯರನ್ನು ಜನಪ್ರತಿನಿಧಿಗಳೆಂದು ಪರಿಗಣಿಸದೆ ಸಾರ್ವಜನಿಕರ ಮುಂದೆ ಜರೆದಿರುವುದಾಗಿ ಈ ಸದಸ್ಯರು ಆರೋಪಿಸಿದ್ದಾರೆ. ತಾವು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಕೋಪಗೊಂಡು ತಮ್ಮ ಮೇಲೆ ಈ ರೀತಿ ಎಗರಾಡಿದ್ದಾರೆ ಎಂದು ಇವರು ಆರೋಪಿಸಿದರು. ಈ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸದಸ್ಯರಾದ ಪ್ರೇಮಾ ಮತ್ತು ಜಮೀರಾ ಪತ್ರಿಕೆಗೆ ತಿಳಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ನಾನು ಸಮಸ್ಯೆಯ ಬಗ್ಗೆ ತಿಳಿಯಲು ಸ್ಥಳಕ್ಕೆ ಬಂದಾಗ ಮಹಿಳಾ ಸದಸ್ಯರು ಏರು ಧ್ವನಿಯಲ್ಲಿ ಮಾತನಾಡಿದಾಗ ಸುಮ್ಮನಿರಿ ಎಂದಷ್ಟೇ ಹೇಳಿದ್ದೇನೆ ವಿನಃ ನಿಂದಿಸಿಲ್ಲ. ಸಾರ್ವಜನಿಕವಾಗಿ ಗೊಂದಲ ಮೂಡಿಸುವುದು ಬೇಡ ಎಂದಷ್ಟೇ ಹೇಳಿರುವುದಾಗಿ ಸ್ಪಷ್ಟನೆ ನೀಡಿದರು.