ಸೋಮವಾರಪೇಟೆ, ಮೇ ೬: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಪರಿಷತ್ನ ೧೦೮ ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಿತು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ೮ನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಶ.ಗ. ನಯನತಾರ ಮಾತನಾಡಿ, ಕನ್ನಡ ಭಾಷೆ, ನಾಡು, ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ೧೯೧೫ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಾರಂಭಿಸಿದ ಕನ್ನಡ ಸಾಹಿತ್ಯ ಪರಿಷತ್ ಇಂದು ಗ್ರಾಮ ಮಟ್ಟದಲ್ಲಿ ಬೆಳೆದು ಹೆಮ್ಮರವಾಗಿದೆ ಎಂದರು.
ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಿ, ನಮ್ಮ ಭಾಷೆ, ಕಲೆ, ಸಂಸ್ಕೃತಿಯನ್ನು ಉಳಿಸಲು ಸಾಕಷ್ಟು ಮಹನೀಯರುಗಳು ಶ್ರಮ ವಹಿಸಿದ್ದಾರೆ ಎಂದರು.
ಸಾಹಿತ್ಯ ಪರಿಷತ್ ಪ್ರಾರಂಭಿಸಿದ್ದ ರಿಂದ ಸಾಕಷ್ಟು ಬರಹಗಾರರಿಗೆ ತಮ್ಮಲ್ಲಿನ ಸಾಹಿತ್ಯವನ್ನು ಹೊರ ಪ್ರಪಂಚಕ್ಕೆ ನೀಡಲು ಸಾಧ್ಯವಾಗಿದೆ. ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಸಾಹಿತಿಗಳನ್ನು ಇಂದು ಮನೆ ಮನೆಗಳಲ್ಲಿ ಕಾಣಬಹುದಾಗಿದೆ. ಸಾಹಿತ್ಯದ ಬೆಳವಣಿಗೆಯೊಂದಿಗೆ ಸಾಹಿತಿಗಳ ಬೆಳವಣಿಗೆಯೂ ಆಗಿದೆ. ಯುವ ಬರಹಗಾರರಿಗೆ ಉತ್ತಮ ವೇದಿಕೆಯಾಗಿ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಿಸಿದರು.
೬ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಜಲಾ ಕಾಳಪ್ಪ ಮಾತನಾಡಿ, ಭಾಷೆ ಉಳಿಸಿ ಬೆಳೆಸಲು ಎಲ್ಲರೂ ನಮ್ಮ ಕನ್ನಡ ಭಾಷೆಯನ್ನು ಬಳಸಬೇಕಿದೆ. ಭಾಷೆಗೆ ಸಂಬAಧಿಸಿದAತೆ ಹೆಚ್ಚು ಹೆಚ್ಚಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಿದಲ್ಲಿ, ಇನ್ನೂ ಹೆಚ್ಚಿನ ಬೆಳವಣಿಗೆ ಕಾಣಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮವನ್ನು ಪಿಎಸ್ಐ ರಮೇಶ್ಕುಮಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ ವಹಿಸಿದ್ದರು. ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.