ಸೋಮವಾರಪೇಟೆ, ಮೇ ೪: ಸಾಲಬಾಧೆಯಿಂದ ವಿಷ ಸೇವಿಸಿದ್ದ ಕೃಷಿಕರೋರ್ವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಸಮೀಪದ ಮಾಟ್ನಳ್ಳಿ ಗ್ರಾಮದ ಆದಿಗಳಲೆಯಲ್ಲಿ ನಡೆದಿದೆ.

ಮಾಟ್ನಳ್ಳಿ-ಆದಿಗಳಲೆ ಗ್ರಾಮದ ನಿವಾಸಿ ಇಂದುಕುಮಾರ್(೪೫) ಎಂಬವರೇ ಸಾವನ್ನಪ್ಪಿದವರು. ಹಲವು ಸಹಕಾರಿ ಸಂಘಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಸಾಲ ಪಡೆದಿದ್ದ ಇಂದುಕುಮಾರ್ ಅವರಿಗೆ ಅದನ್ನು ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆ ಕಳೆದ ತಾ. ೧ರಂದು ಮನೆಯಲ್ಲಿ ವಿಷ ಸೇವಿಸಿದ್ದು, ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಮೃತರ ಪತ್ನಿ ಸುಕನ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪತಿ ಸಾಲ ಬಾಧೆಯಿಂದ ವಿಷ ಸೇವಿಸಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮೃತ ಇಂದುಕುಮಾರ್ ಅವರು ಪತ್ನಿ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.