ಮಡಿಕೇರಿ, ಮೇ ೪: ತಾನು ಓರ್ವ ವಿದ್ಯಾವಂತರಾಗಿದ್ದು, ಯಾವುದೇ ರೀತಿಯ ಕೀಳುಮಟ್ಟದ ರಾಜಕೀಯ ಮಾಡುವುದಿಲ್ಲ. ಆರೋಗ್ಯಕರ ರಾಜಕಾರಣದೊಂದಿಗೆ ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ಚಿತ್ತಹರಿಸುವುದಾಗಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ|| ಮಂಥರ್ಗೌಡ ಅವರು ಹೇಳಿದ್ದಾರೆ.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಬುದ್ಧಿವಂತರಾಗಿದ್ದಾರೆ. ಎಲ್ಲೆಡೆ ಬದಲಾವಣೆಬೇಕೆಂಬ ಅಭಿಪ್ರಾಯ ವ್ಯಕ್ತಗೊಂಡಿದ್ದು, ಸಾರ್ವತ್ರಿಕವಾದ ಬೆಂಬಲ ವ್ಯಕ್ತಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಐದು ಬಾರಿ ಪ್ರತಿನಿಧಿಸಿರುವ ಹಾಲಿ ಶಾಸಕರ ಬಗ್ಗೆ ಜನರ ಪ್ರೀತಿ - ವಿಶ್ವಾಸ ಕಡಿಮೆಯಾಗಿದೆ. ಇವರು ಸತತವಾಗಿ ಆಯ್ಕೆಯಾಗಿದ್ದರೆ ಕ್ಷೇತ್ರದಲ್ಲಿ ಯಾಕೆ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂಬದನ್ನು ಪ್ರಶ್ನಿಸಲೇಬೇಕಾಗುತ್ತಿದೆ. ಎರಡು ಬಾರಿ ಬಿಜೆಪಿ ಅಧಿಕಾರ ನಡೆಸಿದರೂ ಶಾಸಕರಿಗೆ ಮಂತ್ರಿಸ್ಥಾನ ನೀಡದಿರುವುದು ಕ್ಷೇತ್ರಕ್ಕೆ ಅವಮಾನವಾಗಿದೆ. ಮಾತ್ರವಲ್ಲ ಇವರು ಪಕ್ಷದಲ್ಲಿ ಪ್ರಭಾವಿ ಅಲ್ಲವೇ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಮಂಥರ್ಗೌಡ ಹೇಳಿದರು. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಡಿಪಿಐ ಪಕ್ಷಗಳು ಅವರವರ ತತ್ವ ಸಿದ್ಧಾಂತದAತೆ ಸ್ಪರ್ಧಿಸಿವೆ. ಆದರೆ, ಈ ಬಾರಿ ಜನತೆ ಕಾಂಗ್ರೆಸ್ ಅನ್ನು ಆರಿಸಲಿರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಂದೆ ಜೆಡಿಎಸ್ನಲ್ಲಿರುವ ಕುರಿತು ಪ್ರತಿಕ್ರಿಯಿಸಿದ ಅವರು ರಾಜಕೀಯದಲ್ಲಿ ತಂದೆ - ಮಗ ಎಂಬ ಸಂಬAಧ ಇಲ್ಲ. ಕಾಂಗ್ರೆಸ್ನ ಎಲ್ಲಾ ನಾಯಕರೂ ಒಟ್ಟಾಗಿದ್ದು, ಕ್ಷೇತ್ರದಲ್ಲಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇದಲ್ಲದೆ ತಮ್ಮ ಮೇಲೆ ಸೋಲಿನ ಹತಾಶೆಯಿಂದ ಪ್ರತಿಸ್ಪರ್ಧಿಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಮತದಾರರಿಗೆ ಅರಿವಿದೆ ಎಂದ ಅವರು ಈ ಹಿಂದೆ ತಾವು ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸಿದಾಗಲೂ ಉತ್ತಮ ಬೆಂಬಲ ದೊರೆತಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಇದು ಇನ್ನಷ್ಟು ಪೂರಕವಾಗಿದೆ ಎಂದರು.
ಕಾAಗ್ರೆಸ್ ಪಕ್ಷ ಎಲ್ಲಾ ಜಾತಿ - ಜನಾಂಗದವರ ವಿಶ್ವಾಸವನ್ನು ಹೊಂದಿದೆ. ಇಲ್ಲಿ ಯಾವುದೇ ಜಾತಿ ರಾಜಕೀಯ ನಡೆಯುವುದಿಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಸುಶಿಕ್ಷಿತರಾಗಿದ್ದು, ಇದಕ್ಕೆ ಅನುಗುಣವಾಗಿ ನಡೆದುಕೊಳ್ಳುವುದಾಗಿ ನುಡಿದ ಅವರು, ಕಾಂಗ್ರೆಸ್ ಪಕ್ಷ ಈ ಬಾರಿ ಕೊಡಗಿನಲ್ಲಿ ಓರ್ವ ವೈದ್ಯರು ಹಾಗೂ ಓರ್ವ ವಕೀಲರಿಗೆ ಟಿಕೆಟ್ ನೀಡಿದ್ದು, ಇದರಿಂದಲೇ ಬದಲಾವಣೆಯ ಪರ್ವ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡರಾಗಿದ್ದ ಬಿ.ಎ. ಜೀವಿಜಯ ಅವರು ಪಕ್ಷದಲ್ಲೇ ಇರಬೇಕಿತ್ತು ಅವರ ನಿರ್ಧಾರ ಬೇಸರ ತಂದಿದೆ. ಈಗಲೂ ಅವರು ಒಟ್ಟಿಗೆ ಇರಲಿ ಎಂಬ ಅಭಿಪ್ರಾಯ ತನ್ನದು ಎಂದ ಮಂಥರ್ಗೌಡ ಕ್ಷೇತ್ರದ ಯುವ ಜನತೆಗೆ ಈ ತನಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಎಲ್ಲರೂ ಮುಕ್ತವಾಗಿದ್ದಾರೆ ಎಂಬದಾಗಿ ತಿಳಿಸಿ ಗೆಲುವಿನ ಅಚಲ ವಿಶ್ವಾಸ ಹೊಂದಿರುವುದಾಗಿ ಹೇಳಿದರು. (ಕಾಯಪಂಡ ಶಶಿ ಸೋಮಯ್ಯ)