ಮಡಿಕೇರಿ, ಮೇ ೪: ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪನವರು ಮೂರ್ನಾಡುವಿನ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಮೂರ್ನಾಡು ಪಟ್ಟಣದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.

ನಂತರ ಮಾತನಾಡಿ, ಅಭಿವೃದ್ಧಿಯಲ್ಲಿ ಮಡಿಕೇರಿ ಕ್ಷೇತ್ರ ಹಿಂದುಳಿದಿದೆ. ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ರೂ. ೫ ಸಾವಿರಕ್ಕೂ ಅಧಿಕ ಕೋಟಿ ಬೇಕಾಗಿದೆ.

ಕಳೆದ ಮೂರು ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಗೆದ್ದರೂ ಅಭಿವೃದ್ಧಿ ಮಾಡದೇ ನಿರ್ಲಕ್ಷö್ಯ ವಹಿಸಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಅಭ್ಯರ್ಥಿಗಳಿಲ್ಲ. ಚುನಾವಣೆ ಎದುರಿಸಲು ಸಾಧ್ಯವಾಗದ ಅಭ್ಯರ್ಥಿಗಳು ತÀನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.

ಆದರೆ ಕ್ಷೇತ್ರದ ಮತದಾರರು ಬುದ್ಧಿವಂತರಿದ್ದಾರೆ. ನಾವು ತಳಮಟ್ಟದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಜನರನ್ನು ತಲುಪಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ನಡೆಸುತ್ತಿರುವ ಅಪಪ್ರಚಾರಗಳಿಗೆ ಗೆಲುವು ಸಿಗಲ್ಲ. ಕೊಡಗಿನ ಜನರು ಸ್ವಾಭಿಮಾನಿಗಳು, ಹೊರಗಿನವರಿಗೆ ಮಣೆ ಹಾಕುವುದಿಲ್ಲ. ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್, ಹಿರಿಯ ಉಪಾಧ್ಯಕ್ಷ ಬಲ್ಲಚಂಡ ಗೌತಮ್, ಯೂಸುಪ್ ಹಾಜಿ ಕೊಂಡAಗೇರಿ, ಶಿವದಾಸ್ ನೆಲ್ಲಿಹುದಿಕೇರಿ, ಜಿಲ್ಲಾ ಯುವ ಜೆಡಿಎಸ್ ವಕ್ತಾರ ಜಿನಾಸುದ್ದೀನ್ ಸುಂಟ್ಟಿಕೊಪ್ಪ, ನಾಪಂಡ ರವಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪಿ.ಎಂ. ಮಂಜುನಾಥ್, ಸೈಫುದ್ದೀನ್ ಚಾಮಿಯಾಲ್ ಹಾಗೂ ಜೆಡಿಎಸ್ ಮೂರ್ನಾಡು ಭಾಗದ ಮುಖಂಡರುಗಳು ಇದ್ದರು.