ಹೆಚ್. ವಿಶ್ವನಾಥ್
ಕುಶಾಲನಗರ, ಮೇ ೪: ಕೊಡಗು ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯ ಹೆಚ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಮಾತುಗಳು ಕೇವಲ ಭಾವನಾತ್ಮಕವಾಗಿರಬಾರದು. ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ವ್ಯಕ್ತಿಗಿಂತ ಪಕ್ಷವೇ ಮೇಲು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೂರು ಮಂದಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿರುವುದಾಗಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷದ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ತಾನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ವಿಶ್ವನಾಥ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪ್ರಮುಖ ಚಂದ್ರಮೌಳಿ ಮಾತನಾಡಿ, ರಾಜಕಾರಣದಲ್ಲಿ ತಾಳ್ಮೆ ಅಗತ್ಯ. ವೈಯಕ್ತಿಕ ಭಿನ್ನಾಭಿಪ್ರಾಯಗಳಲ್ಲಿ ತೊಡಗಿದಲ್ಲಿ ಪಕ್ಷದ ಬೆಳವಣಿಗೆ ಸಾಧ್ಯವಿಲ್ಲ. ನಿಷ್ಠೆ ಇಲ್ಲದವರಿಗೆ ಕಾಂಗ್ರೆಸ್ನಲ್ಲಿ ಅವಕಾಶವಿಲ್ಲ ಎಂದು ಹೇಳಿದರು. ಅನಂತಕುಮಾರ್ ಅವರು ತಮ್ಮ ಸಲಹೆಗೆ ಕನಿಷ್ಟ ಸ್ಪಂದನ ನೀಡಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಂಜುನಾಥ್ ಗುಂಡೂರಾವ್, ಕೆ.ಎಂ. ಲೋಕೇಶ್, ಯಾಕೂಬ್, ನಟೇಶ್ ಗೌಡ, ಸಜಿ, ಪುಟ್ಟಲಕ್ಷಿö್ಮ ಮತ್ತಿತರರು ಇದ್ದರು.