ಸೋಮವಾರಪೇಟೆ, ಮೇ ೪: ನಿನ್ನೆ ದಿನ ಕೆರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಚೌಡ್ಲು ಗ್ರಾಮದ ಅರೆಬೆಟ್ಟ ನಿವಾಸಿ, ಕೂಲಿ ಕಾರ್ಮಿಕ ಸದಾಶಿವ ಮತ್ತು ಲೀಲಾ ದಂಪತಿ ಪುತ್ರ, ಶರತ್ (೧೪) ಎಂಬಾತನ ಮೃತದೇಹ ಇಂದು ಪತ್ತೆಯಾಗಿದೆ.
ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ೯ನೇ ತರಗತಿ ವಿದ್ಯಾರ್ಥಿಯಾಗಿದ್ದ ಶರತ್ ನಿನ್ನೆ ದಿನ, ತನ್ನ ತಂದೆ ಸದಾಶಿವ ಹಾಗೂ ಸಹೋದರನೊಂದಿಗೆ ಕಲ್ಕಂದೂರು ಕೆರೆಗೆ ತೆರಳಿದ್ದು, ಸಹೋದರನೊಂದಿಗೆ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದಾನೆ. ಈ ಸಂದರ್ಭ ಆಕಸ್ಮಿಕವಾಗಿ ನೀರಿನ ಆಳಕ್ಕೆ ಮುಳುಗಿದ್ದಾನೆ. ಇದನ್ನು ಗಮನಿಸಿದ ದಡದಲ್ಲಿದ್ದ ತಂದೆ ಸದಾಶಿವ ಅವರು ತಕ್ಷಣ ಕೆರೆಗೆ ದುಮುಕಿ ಆತನನ್ನು ಉಳಿಸುವ ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ.
ನಂತರ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದು, ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಂಜೆಯವರೆಗೂ ನೀರಿನಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿರಲಿಲ್ಲ.
ಇಂದು ಬೆಳಿಗ್ಗೆ ಕೆರೆಯ ದಡದಲ್ಲಿ ಶರತ್‌ನ ಮೃತದೇಹ ಪತ್ತೆಯಾಗಿದ್ದು, ಪೊಲೀಸ್ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮೃತದೇಹವನ್ನು ಹೊರ ತೆಗೆಯಲಾಯಿತು. ಈ ಸಂದರ್ಭ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಶರತ್ ತಂದೆ, ತಾಯಿ ಸೇರಿದಂತೆ ಓರ್ವ ಸಹೋದರನನ್ನು ಅಗಲಿದ್ದಾನೆ.