ಮಡಿಕೇರಿ, ಮೇ ೫: ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಬಿಜೆಪಿ ಶಾಸಕರ ಪರ ಮತ ಕೇಳಿದ್ದಾರೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಖುದ್ದು ನಾಪಂಡ ಮುತ್ತಪ್ಪ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಪಂಡ ಮುತ್ತಪ್ಪ ಅವರು, ನಾನು ಬಿಜೆಪಿ ಶಾಸಕರಿಗೆ ಮತ ನೀಡಿ ಎಂದು ಎಲ್ಲಿಯೂ ಯಾರ ಬಳಿ ಕೂಡ ಕೇಳಿಲ್ಲ.
ನೇರವಾಗಿ ಚುನಾವಣೆ ಎದುರಿಸಲು ಸಾಧ್ಯವಾಗದವರು ಅಪಪ್ರಚಾರ ನಡೆಸುತ್ತಿದ್ದಾರೆ. ಸುಂಟಿಕೊಪ್ಪದಲ್ಲಿ ಜೆಡಿಎಸ್ ಪ್ರಚಾರದ ಸಂದರ್ಭ ಅರಕಲಗೋಡು ಭಾಗದ ರಸ್ತೆಗಳಿಗಿಂತ ಮಡಿಕೇರಿ ಕ್ಷೇತ್ರದ ರಸ್ತೆಗಳೇ ಉತ್ತಮವಾಗಿದೆ ಎಂದಿದ್ದೆ. ಅಲ್ಲಿನ ಶಾಸಕರಿಗಿಂತ ಮಡಿಕೇರಿ ಶಾಸಕರೇ ಉತ್ತಮರು ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್ನವರು ನನ್ನ ಮಾತನ್ನು ತಿರುಚಿ ಬಿಜೆಪಿ ಪರ ಮತಯಾಚಿಸಿರುವಂತೆ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ ಎಂದು ನಾಪಂಡ ಮುತ್ತಪ್ಪ ಸ್ಪಷ್ಟನೆ ನೀಡಿದರು.
ಅಲ್ಪಸಂಖ್ಯಾತರು ಇದೀಗ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಪಕ್ಷ ಸೇರುತ್ತಿದ್ದಾರೆ. ಮಡಿಕೇರಿ ಕ್ಷೇತ್ರದ ಜನರು ಕಾಂಗ್ರೆಸ್ನ ಅಪಪ್ರಚಾರಕ್ಕೆ ಕಿವಿಗೊಡದೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮುತ್ತಪ್ಪ ಮನವಿ ಮಾಡಿದರು.ಕಾಂಗ್ರೆಸ್ನವರು ಮತ ಪಡೆಯಲು ಜಾತಿ ಆಧಾರದಲ್ಲಿ ತಂಡ ರಚಿಸಿಕೊಂಡಿದ್ದಾರೆ. ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿಗೆ ಬುಕ್ ಆಗಿದ್ದಾರೆ. ರಂಜನ್ ಮತ್ತು ಮಂಥರ್ ಗೌಡರಿಗಿಂತ ನನ್ನ ಆಸ್ತಿಯ ಲೆಕ್ಕವೇ ಹೆಚ್ಚಿದೆ. ಹೀಗಿದ್ದಾಗ ಯಾರು ಯಾರಿಗೆ ಬುಕ್ ಆಗುತ್ತಾರೆ ಎಂಬುದನ್ನು ಜನರೇ ಅರ್ಥಮಾಡಿಕೊಳ್ಳಬೇಕು. ನಾನು ಬಿಜೆಪಿ ನಾಯಕರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ.
ಬಿಜೆಪಿಯು ಕೋಮುವಾದಿ ಪಕ್ಷವೆಂದು ನನ್ನ ಅಭಿಪ್ರಾಯ. ನಾನು ಚುನಾವಣೆಯಿಂದ ಹೊರಗಿರುತ್ತೇನೆ ಹೊರತು ಸಿದ್ಧಾಂತದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲ್ಲ. ರಾಷ್ಟಿçÃಯ ಪಕ್ಷಗಳು ಹಣ, ಹೆಂಡ, ಬಿರಿಯಾನಿ ಹಂಚಿ ಮತ ಪಡೆಯಲು ಯತ್ನಿಸುತ್ತಿವೆ. ಆದರೆ ನೈಜ ಮತದಾರರೆಲ್ಲಾ ಜೆಡಿಎಸ್ ಪರವಾಗಿದ್ದು, ಅವರಿಗೆ ಮಜ್ಜಿಗೆ, ನೀರು ಮಾತ್ರ ಕೊಟ್ಟಿದ್ದೇನೆ. ಹಣದ ಹೊಳೆ ಹರಿಸಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ಗೆ ಚುನಾವಣೆ ಗೆಲ್ಲಲು ಯಾವುದೇ
(ಮೊದಲ ಪುಟದಿಂದ) ಅಜೆಂಡಾ ಇಲ್ಲ ಎಂದರು. ನಾನು ಪಕ್ಕಾ ಎಡಪಂಥೀಯ. ಟಿಪ್ಪು ಜಯಂತಿ ಆಚರಣೆಯ ಪರವೂ ಇಲ್ಲ, ವಿರೋಧವೂ ಇಲ್ಲ. ನಾನು ಕೇವಲ ಅಭಿವೃದ್ಧಿ ಪರ ಎಂದು ನಾಪಂಡ ಮುತ್ತಪ್ಪ ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಬಿಜೆಪಿಯ ‘ಬಿ’ ಟೀಮ್. ಈ ಹಿಂದೆ ಕಾಂಗ್ರೆಸ್ನಲ್ಲಿರುವ ಶಾಸಕರು ಅಲ್ಪಸಂಖ್ಯಾತರ ಮತ ಪಡೆದು ಬಿಜೆಪಿ ಪಕ್ಷಕ್ಕೆ ಹಾರಿ ಸರ್ಕಾರ ರಚನೆ ಮಾಡಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಆದರೆ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ೯ ಬಾರಿ ಕೊಡಗಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಸೂಕ್ತ ಸ್ಪಂದನ ನೀಡಿದ್ದಾರೆ. ಅಭಿವೃದ್ಧಿ ಆಧಾರದಲ್ಲಿ ಜನತೆ ಜೆಡಿಎಸ್ಗೆ ಬೆಂಬಲ ಸೂಚಿಸಿದ್ದು, ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು, ಪ್ರಚಾರ ಸಮಿತಿ ಅಧ್ಯಕ್ಷ ಇಸಾಕ್ ಖಾನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಮೋಹನ್ ಮೌರ್ಯ ಇದ್ದರು.