ಚೆಯ್ಯಂಡಾಣೆ, ಮೇ ೩: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಚೆಯ್ಯಂಡಾಣೆಯಲ್ಲಿ ಪ್ರಚಾರ ಸಭೆ ನಡೆಸುವ ಮೂಲಕ ಮತಯಾಚನೆ ಮಾಡಿದರು.

ಈ ಸಂದರ್ಭ ಮಾತನಾಡಿದ ಬೋಪಯ್ಯ ತನ್ನ ಅಧಿಕಾರ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದರು.

ಮೋದಿಯವರ ಆಡಳಿತ ವೈಖರಿ, ಸಾಧನೆಗಳು, ಯೋಜನೆಗಳು, ರಾಜ್ಯ ಸರಕಾರದ ಸಾಧನೆಗಳನ್ನು ಕೂಡ ಕರಪತ್ರದ ಮೂಲಕ ಮನೆ ಮನೆಗೆ ತಲುಪಿಸುವಂತಹ ಕೆಲಸವನ್ನು ಮಾಡಿದ್ದೇವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಮೇಲ್ಮಟ್ಟದವರೆಗೆ ಒಂದಲ್ಲ ಒಂದು ರೀತಿಯ ಸೌಲಭ್ಯವನ್ನು ನೀಡಿದ್ದೇವೆ ಎಂದರು.

ವ್ಯಾಪ್ತಿಯಲ್ಲಿ ಅನೇಕ ಸೇತುವೆ ನಿರ್ಮಾಣ, ಪರಿಹಾರ ವಿತರಣೆ, ಮೆಡಿಕಲ್ ಕಾಲೇಜು ಸ್ಥಾಪನೆ, ವೀರಾಜಪೇಟೆ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ, ವೀರಾಜಪೇಟೆ ಡಯಾಲಿಸ್ ಕೇಂದ್ರದಲ್ಲಿ ೧೩ ಜನಕ್ಕೆ , ಮಡಿಕೇರಿಯಲ್ಲಿ ೨೩ ಜನಕ್ಕೆ ಡಯಾಲಿಸಸ್ ಮಾಡುತ್ತಿದ್ದಾರೆ. ಜನಔಷಧಿ ಕೇಂದ್ರ ಹೀಗೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಬಿಜೆಪಿ ಸರಕಾರ ನಡೆಸಿದೆ ಎಂದರು. ಈ ಚುನಾವಣೆಯಲ್ಲಿ ನಮ್ಮ ಅಭಿವೃದ್ಧಿ ನಮ್ಮ ಮೂಲಮಂತ್ರ; ಅದರ ಜೊತೆಗೆ ಈ ದೇಶ ದೇಶವಾಗಿ ಉಳಿಯಬೇಕು, ಒಂದು ಕಡೆ ಹಿಂದುತ್ವ, ಇನ್ನೊಂದು ಕಡೆ ಅಭಿವೃದ್ಧಿ; ಭಾರತ ಭಾರತವಾಗಿಯೇ ಉಳಿಯಬೇಕೆಂದರು. ಪ್ರಚಾರ ಸಭೆಯನುದ್ದೇಶಿಸಿ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮನು ಮುತ್ತಪ್ಪ, ಅಡ್ಡಂಡ ಕಾರ್ಯಪ್ಪ ಮಾತನಾಡಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಸಮಿತಿಯ ಸದಸ್ಯ ಶಿವಕುಮಾರ್ ನಾಣಯ್ಯ, ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್, ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಉಷಾ ದೇವಮ್ಮ, ಉಮಾ ಪ್ರಭು, ಕೋಡಿರ ಪ್ರಸನ್ನ ತಮ್ಮಯ್ಯ, ಚೆಯ್ಯಂಡಾಣೆ ಶಕ್ತಿ ಕೇಂದ್ರದ ಅಧ್ಯಕ್ಷ ದನೋಜ್ ಪೋಕುಳಂಡ್ರ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೊಟ್ಟಂಬೈಲು, ನೆಲ್ಲಚಂಡ ಕಿರಣ್ ಕಾರ್ಯಪ್ಪ ಹಾಗೂ ಇತರರು ಇದ್ದರು.