ಸುಂಟಿಕೊಪ್ಪ, ಮೇ ೩ : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತಯಾಚನೆ ಹಾಗೂ ಚುನಾವಣಾ ಪ್ರಚಾರ ಭಾಷಣವನ್ನು ಎಂ.ಪಿ.ಅಪ್ಪಚ್ಚು ರಂಜನ್ ಭಾನುವಾರ ಮಾಡಿದರು.

ಕಾನ್‌ಬೈಲ್, ನಾಕೂರು ಶಿರಂಗಾಲ, ಕೊಡಗರಹಳ್ಳಿ, ಕಂಬಿಬಾಣೆ, ಸುಂಟಿಕೊಪ್ಪದಲ್ಲಿ ಪ್ರಚಾರ ನಡೆಸಿದ ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ನಂತರ ಕನ್ನಡ ವೃತ್ತದಲ್ಲಿ ಸಾರ್ವಜನಿಕ ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.

ಪಟ್ಟಣದ ಪ್ರಮುಖ ಬೀದಿ, ವಾಣಿಜ್ಯ ಮಳಿಗೆ, ಮನೆಮನೆಗೆ ತೆರಳಿ ಮತ ಯಾಚಿಸಿದರು, ಹಲವು ಬಹಿರಂಗ ಸಭೆಗಳಲ್ಲಿ ಮಾತನಾಡಿದ ಅವರು ಕಳೆದ ೨೫ ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಆದ ಅಭಿವೃದ್ಧಿಗಳನ್ನು ವಿವರಿಸಿ ಹೇಳಿ ಪ್ರಗತಿಯೇ ಬಿಜೆಪಿಯ ಮಂತ್ರ, ಆದರಿಂದ ಬಿಜೆಪಿಯೇ ಭರವಸೆ ಎಂದರು.

ರೋಡ್ ಶೋ ಸುಮಾರು ಎರಡು ಕಿ. ಮೀ. ಸಾಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕೊನೆಗೊಂಡಿತು. ಪಟ್ಟಣದ ಕನ್ನಡ ವೃತ್ತದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಪ್ಪಚ್ಚು ರಂಜನ್, ಈಗಾಗಲೇ ಮಡಿಕೇರಿ ಕ್ಷೇತ್ರ ವಿದ್ಯಾ ಕೇಂದ್ರವಾಗಿ ರೂಪುಗೊಂಡಿದೆ, ಈಗ ನಮ್ಮ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರು, ಮೈಸೂರು, ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಹೋಗಬೇಕಾಗಿಲ್ಲ, ಕಾನೂನು ಮತ್ತು ಐಐಟಿ ಹೊರತುಪಡಿಸಿ ಎಲ್ಲವೂ ಲಭ್ಯವಿದೆ, ಮುಂದಿನ ಅವಧಿಯಲ್ಲಿ ಆ ಶಿಕ್ಷಣ ಸಂಸ್ಥೆಗಳನ್ನು ಕೂಡ ಕ್ಷೇತ್ರದಲ್ಲಿ ಸ್ಥಾಪಿಸಲಾಗುವುದು ಎಂಬ ಭರವಸೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಜಿ. ಮೇದಪ್ಪ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಬಿ.ಬಿ. ಭಾರತೀಶ್, ವಿ.ಕೆ.ಲೋಕೇಶ್, ಅಭಿಮನ್ಯು ಕುಮಾರ್, ತಾ.ಪಂ. ಮಾಜಿ ಉಪಾಧ್ಯಕ್ಷರುಗಳಾದ ಅಭಿಮನ್ಯು ಕುಮಾರ್, ಶಂಕರನಾರಾಯಣ ಸಹ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ತಾ.ಪಂ. ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಶಕ್ತಿ ಕೇಂದ್ರದ ಬಿ.ಕೆ.ಪ್ರಶಾಂತ್, ವಾಸು, ಪಂಚಾಯಿತಿ ಸದಸ್ಯರುಗಳಾದ ಪಿ.ಆರ್. ಸುನಿಲ್ ಕುಮಾರ್, ಬಿ.ಎಂ. ಸುರೇಶ್, ಮಂಜು, ಬಿ.ಕೆ. ಮೋಹನ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.