ಮಡಿಕೇರಿ, ಮೇ ೩: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಕಾಲೇಜು ಆವರಣದಲ್ಲಿ ನಡೆಯಿತು.

ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕುಲಪತಿ ಡಾ. ಎಂ.ಕೆ. ರಮೇಶ್ ಮಾತನಾಡಿ ಪ್ರಕೃತಿ ಸೊಬಗಿನ ಬೆಟ್ಟಗುಡ್ಡಗಳ ಮಧ್ಯೆ ಸ್ಥಾಪಿತವಾದ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮುಗುಳುನಗೆಯಲ್ಲಿ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ವೈದ್ಯರಲ್ಲಿ ವಾಕ್ ಸಾಮಾರ್ಥ್ಯ ಚೆನ್ನಾಗಿದ್ದವರು ಮಾತ್ರ ಸಾಧÀನೆಯನ್ನು ತೋರುತ್ತಾರೆ. ತಕ್ಷಣಕ್ಕೆ ದುಡ್ಡು ಮಾಡಬೇಕೆಂಬ ಉದ್ದೇಶ ಇರುವವರು ವೈದ್ಯ ಕ್ಷೇತ್ರಕ್ಕೆ ಬರಬಾರದು. ಭಾರತ ದೇಶ ಯುವಜನರ ಕಣಜವಾಗಿ ಮಾರ್ಪಾಡಾಗುತ್ತಿದೆ ಎಂದರು.

ಪದ್ಮಶ್ರೀ ಡಾ. ಮಾತ ಬಿ. ಮಂಜಮ್ಮ ಜೋಗತ್ತಿ ಮಾತನಾಡಿ, ನಾನು ೯೦ರ ದಶಕದಲ್ಲಿ ಕಲಾವಿದೆಯಾಗಿ ಮಡಿಕೇರಿ ನಗರದ ಬೀದಿಯಲ್ಲಿ ನೃತ್ಯ ಮಾಡಲು ಬಂದಿದೆ. ಈಗ ಅತಿಥಿಯಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಮೊದಲ ಬಾರಿಗೆ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಹಾಗೂ ಪದ್ಮಶ್ರೀ ಡಾ. ಮಾತ ಬಿ, ಮಂಜಮ್ಮ ಜೋಗತ್ತಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ಎಸ್., ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ. ಕಾರ್ಯಪ್ಪ ಕೆ.ಬಿ., ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸ್ವಾಮಿ ಎ.ಎಲ್., ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರುಗಳಾದ ಡಾ, ಜಯಲಕ್ಷಿö್ಮ ಪಾಟ್ಕರ್, ಎಂ.ಎ. ನಿರಂಜನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ಈ ಬಾರಿ ೧೫೦ ವೈದ್ಯ ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮಿ, ಪದವಿ ಸ್ವೀಕರಿಸಿದರು.