ಸೋಮವಾರಪೇಟೆ, ಮೇ ೨: ಕಳೆದ ೨೫ ವರ್ಷಗಳಿಂದ ಬಿಜೆಪಿ ಶಾಸಕರನ್ನು ಕಂಡಿರುವ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಈ ಬಾರಿ ಮತದಾರರು ಬದಲಾವಣೆ ಬಯಸಿದ್ದಾರೆ. ಶಾಸಕ ಅಪ್ಪಚ್ಚುರಂಜನ್ ಅವರನ್ನು ಮತದಾರರು ತಿರಸ್ಕರಿಸಲಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಹೇಳಿದರು.
ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ೫ ಬಾರಿ ಗೆಲುವು ದಾಖಲಿಸಿದರೂ, ಇಂದಿಗೂ ಗ್ರಾಮಗಳಲ್ಲಿ ಅಭಿವೃದ್ಧಿಯಾಗಿಲ್ಲ. ಕೆಲವೊಂದು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡುವ ಪರಿಸ್ಥಿತಿ ಬಂದಿದೆ. ಇದೇನಾ ಅಭಿವೃದ್ಧಿ ಎಂದು ವ್ಯಂಗ್ಯವಾಡಿದರು.
ಶಾಸಕರು ತಮ್ಮ ಇಲ್ಲಿಯವರೆಗೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಂಡು ಮತ ಕೇಳುವ ಬದಲು, ಎದುರು ಅಭ್ಯರ್ಥಿಯ ವೈಯಕ್ತಿಕ ನಿಂದನೆ ಮಾಡಿಕೊಂಡು ಮತ ಬೇಡುತ್ತಿರುವುದು ಸರಿಯಲ್ಲ. ಈ ಬಾರಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತನ್ನನ್ನು ಬಿಜೆಪಿಯವರು ಹೊರಗಿನವರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶವನ್ನು ಸಂವಿಧಾನ ನೀಡಿದೆ. ನಾನು ೨೫ ವರ್ಷ ರಾಜಕೀಯ ಮಾಡಲು ಇಲ್ಲಿಗೆ ಬಂದಿಲ್ಲ. ೫ ವರ್ಷ ಅವಕಾಶ ನೀಡಿದರೆ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಕೆಲಸ ಮಾಡಿಲ್ಲವೆಂದಾದರೆ ನನ್ನನ್ನು ಮನೆಗೆ ಕಳುಹಿಸಿ. ನನ್ನ ತಂದೆ ಜೆಡಿಎಸ್; ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಇದಕ್ಕೂ ಟೀಕೆಗಳು ಬರುತ್ತಿವೆ. ಶಾಸಕರ ಸಹೋದರರೋರ್ವರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲವೇ? ಟೀಕೆಗಳನ್ನು ಮಾಡುವ ಮುನ್ನ ಬಿಜೆಪಿಗರು ಯೋಚಿಸಲಿ ಎಂದು ಮಂಥರ್ ಹೇಳಿದರು.
ಕಾಂಗ್ರೆಸ್ ಪಕ್ಷವು ಈಗಾಗಲೇ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಘೋಷಣೆಗಳನ್ನು ಅನುಷ್ಠಾನಕ್ಕೆ ತರಲಿದೆ. ರಾಜ್ಯದಲ್ಲಿ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ. ಜಿಲ್ಲೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ತನ್ನ ವಿರುದ್ಧ ಹಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇದಕ್ಕೆ ಮತದಾರರು ಬೆಲೆ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಬಿಜೆಪಿಯ ಭದ್ರಕೋಟೆ ಎಂದು ಕರೆದುಕೊಳ್ಳುತ್ತಾ ೩೦ ವರ್ಷದಿಂದ ರಾಜಕೀಯ ಮಾಡುತ್ತಿರುವ ಶಾಸಕರು, ತಮ್ಮ ಗೆಲುವಿಗಾಗಿ ರಾಷ್ಟçಮಟ್ಟದ ನಾಯಕರನ್ನು ಕರೆತರುವುದು ಯಾಕೆ? ಅಮಿತ್ ಶಾ ರಂತಹ ನಾಯಕರು ಮತ್ತು ರಾಜ್ಯ ನಾಯಕರನ್ನು ಜಿಲ್ಲೆಗೆ ಕರೆತಂದು ಪ್ರಚಾರ ಮಾಡುವ ಅವಶ್ಯಕತೆ ಇರಲಿಲ್ಲ. ಈ ಬಾರಿ ಬಿಜೆಪಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದರು.
ಅಮಿತ್ ಶಾ ಅಥವಾ ಯೋಗಿ ಆದಿತ್ಯನಾಥ್‌ರಂತಹ ಯಾರೇ ಕೊಡಗಿಗೆ ಬಂದರೂ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೂ ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ೧೨೫ ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ರಾಜ್ಯದಲ್ಲಿ ೬೫ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ವ್ಯಂಗ್ಯವಾಡಿದರು.
ಮಡಿಕೇರಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕುಶಾಲನಗರದ ಸಮುಚ್ಚಯ ಭವನ, ಮಡಿಕೇರಿ ಕನ್ನಡ ಭವನ, ಸೋಮವಾರಪೇಟೆ ಶತಮಾನೋತ್ಸವ ಭವನ ಕಾಮಗಾರಿಗಳು ಪೂರ್ಣಗೊಂಡಿಲ್ಲ. ರಸ್ತೆಗಳೂ ದುಸ್ಥಿತಿಯಲ್ಲಿವೆ. ಡಿ.ಸಿ. ಕಚೇರಿ ತಡೆಗೋಡೆಯು ಕಳಪೆ ಕಾಮಗಾರಿಗೆ ಕುಸಿದಿದೆ. ಇದೇನಾ ಅಭಿವೃದ್ಧಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕ್ಷೇತ್ರದ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಮದು ಅಭ್ಯರ್ಥಿಗಳೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ಕ್ಷೇತ್ರದ ನಿವಾಸಿಗಳಲ್ಲ. ವೀರಾಜಪೇಟೆಯ ಅಭ್ಯರ್ಥಿ ಮಡಿಕೇರಿಯವರು. ಮಡಿಕೇರಿಯ ಅಭ್ಯರ್ಥಿ ವೀರಾಜಪೇಟೆಯವರು ಎಂದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಈಶ್ವರಚಂದ್ರ ಸಾಗರ್, ಹಣಕೋಡು ಸುರೇಶ್, ಶಾಂತವೇರಿ ವಸಂತ್, ಹೆಚ್.ಎ. ನಾಗರಾಜು, ಕೆ.ಪಿ.ಚಂದ್ರಕಲಾ, ಹರಪಳ್ಳಿ ರವೀಂದ್ರ ಸೇರಿದಂತೆ ಇತರರು ಮಾತನಾಡಿ, ಬಿಜೆಪಿ ಸರ್ಕಾರ ಹಾಗೂ ಅಭ್ಯರ್ಥಿ ರಂಜನ್ ವಿರುದ್ಧ ವಾಗ್ಧಾಳಿ ನಡೆಸಿದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ವಹಿಸಿದ್ದರು. ವೇದಿಕೆಯಲ್ಲಿ ಉಸ್ತುವಾರಿ ಕೆ.ಎಂ. ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು, ಮುಖಂಡರಾದ ಅನಂತ್‌ಕುಮಾರ್, ಕೆ.ಎ. ಯಾಕೂಬ್, ಎಸ್.ಎಂ. ಚಂಗಪ್ಪ, ಕೆ.ಕೆ. ಮಂಜುನಾಥ್‌ಕುಮಾರ್, ಶೀಲಾ ಡಿಸೋಜ, ದಿವ್ಯಾ ಮಂಥರ್, ಸುನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿವಿಧ ರಾಜಕೀಯ ಪಕ್ಷಗಳ ಹತ್ತಾರು ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.