ದಕ್ಷಿಣ ಭಾರತದಲ್ಲಿ ಕರ್ನಾಟಕ ಚುನಾವಣಾ ಅಖಾಡಕ್ಕೆ ಸಿದ್ದವಾಗಿದ್ದು ೨೨೪ ಕ್ಷೇತ್ರಗಳ ಮತದಾರರು ಮತ ಚಲಾಯಿಸಲಿದ್ದಾರೆ. ದಕ್ಷಿಣ ಪ್ರಾಂತ್ಯದ ಕೇರಳದಲ್ಲಿ ಸಿ.ಪಿ.ಐ. ಪಕ್ಷ , ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ, ಆಂಧ್ರದಲ್ಲಿ ವೈ.ಎಸ್.ಆರ್. ಕಾಂಗ್ರೆಸ್, ತೆಲಂಗಾಣದಲ್ಲಿ ಬಿ.ಆರ್.ಎಸ್. ಪಕ್ಷ ಆಡಳಿತದಲ್ಲಿದೆ. ಕರ್ನಾಟಕದಲ್ಲಿ ಈತನಕ ಬಿ.ಜೆ.ಪಿ. ಆಡಳಿತವಿತ್ತು. ಈ ದಕ್ಷಿಣ ಪ್ರಾಂತ್ಯದ ಆಡಳಿತವನ್ನು ಬಿ.ಜೆ.ಪಿ. ಪುನಃ ಪಡೆಯುತ್ತದೋ ಎಂದು ಕಾದುನೋಡಬೇಕು ಈ ಚುನಾವಣೆಯಲ್ಲಿ ದಿಗ್ಗಜರಾದ ಎಸ್.ಆರ್. ಬೊಮ್ಮಯಿಯವರು, ಸಿದ್ದರಾಮಯ್ಯನವರು, ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿರವರು ಸ್ಪರ್ಧಿಸುತ್ತಿದ್ದು ಈ ಕ್ಷೇತ್ರ ಮದಗಜಗಳ ಹೋರಾಟಕ್ಕೆ ಸಾಕ್ಷಿಯಾಗಿದೆ. ನಮ್ಮ ಕೊಡಗು ಜಿಲ್ಲೆಯಲ್ಲಿ ೨ ಕ್ಷೇತ್ರದಿಂದ ಅಂದಾಜು ೪,೫೨,೬೪೨ ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಮಡಿಕೇರಿ ಕ್ಷೇತ್ರ ಹಿಂದೆ ಸೋಮವಾರಪೇಟೆ ಕ್ಷೇತ್ರ ಆಗಿದ್ದಾಗ ಆರ್. ಗುಂಡೂರಾವ್‌ರವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದು ನಂತರ ನಡೆದ ಚುನಾವಣೆಯಲ್ಲಿ ೧೯೮೩ರಲ್ಲಿ ಜನತಾ ಪಕ್ಷದ ಜೀವಿಜಯನವರು ಮುಖ್ಯಮಂತ್ರಿಯಾದ ಆರ್. ಗುಂಡೂರಾವ್‌ರನ್ನು ಸೋಲಿಸಿ ಹೆಗ್ಗಡೆ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದು ಈ ಕ್ಷೇತ್ರ ರಾಜ್ಯದಲ್ಲೇ ಪ್ರತಿಷ್ಠಿತ ಕ್ಷೇತ್ರ ಆಗಿದೆ. ಇಲ್ಲಿ ಜೀವಿಜಯನವರನ್ನು ಸೋಲಿಸಿದ ಅಪ್ಪಚ್ಚು ರಂಜನ್ ಅವರು ೨ ಬಾರಿ ಸೋಮವಾರಪೇಟೆ ಕ್ಷೇತ್ರದಿಂದ, ೩ ಬಾರಿ ಮಡಿಕೇರಿ ಕ್ಷೇತ್ರದಿಂದ ಜಯಶೀಲರಾಗಿ ೫ ಬಾರಿ ಗೆದ್ದಿದ್ದಾರೆ. ೨೦೦೪ ರಲ್ಲಿ ಒಮ್ಮೆ ಜೀವಿಜಯನವರ ಎದುರು ಸೋಲನ್ನು ಕಂಡಿದ್ದಾರೆ. ೨೦೧೨ರಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ೧೧ ತಿಂಗಳ ಅವಧಿಗೆ ಸಚಿವರಾಗಿದ್ದು ಗೆಲ್ಲುವ ಕುದುರೆ ಎಂಬ ಹೆಸರನ್ನು ಪಡೆದಿದ್ದಾರೆ.
ಕಾಂಗ್ರೆಸ್‌ನ ಅಭ್ಯರ್ಥಿ ಡಾ. ಮಂಥರ್‌ಗೌಡ ಅವರು ಮಾಜಿ ಸಚಿವ ಎ. ಮಂಜು ಅವರ ಪುತ್ರರಾಗಿದ್ದು, ಹಿಂದೆ ಕೊಡಗಿನಲ್ಲಿ ನಡೆದ ಎಂ.ಎಲ್.ಸಿ. ಚುನಾವಣೆಯಲ್ಲಿ ಬಿ.ಜೆ.ಪಿ.ಯ ಅಭ್ಯರ್ಥಿಗೆ ಪೈಪೋಟಿ ನೀಡಿ ಸೋಲನ್ನು ಅನುಭವಿಸಿದ್ದರೂ ಮತಗಳಿಕೆಯಲ್ಲಿ ಅಚ್ಚರಿ ಮೂಡಿಸಿದ್ದರು. ಜೆ.ಡಿ.ಎಸ್.ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ನಾಪಂಡ ಮುತ್ತಪ್ಪ ಇವರು ಸೋಮವಾರಪೇಟೆ ತಾಲೂಕಿನ ಸಿದ್ದಲಿಂಗಪುರ ಗ್ರಾಮದ ನಿವಾಸಿ ಆಗಿದ್ದು, ಬೆಂಗಳೂರಿನಲ್ಲಿ ಹಲವಾರು ಕಾರ್ಮಿಕ ಸಂಘಟನೆಗಳಲ್ಲಿ ಹೋರಾಟ ನಡೆಸಿ ಅದರ ನೇತೃತ್ವವನ್ನು ವಹಿಸಿದ್ದರು. ಕಳೆದ ೬ ತಿಂಗಳಿAದ ಜಿಲ್ಲಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ರಾಜಕಾರಣದಲ್ಲಿ ಈ ಕ್ಷೇತ್ರಕ್ಕೆ ಮಡಿಕೇರಿ ಕ್ಷೇತ್ರ ಎಂಬ ಹೆಸರಿದ್ದರೂ ರಾಜಕೀಯ ರಂಗದಲ್ಲಿ ಹೆಚ್ಚಿನ ರಾಜಕಾರಣಿಗಳು ಬೆಳೆಯುತ್ತಿರುವ ಭಾಗ ಎಂದರೆ ಅದು ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಎಂದರೆ ತಪ್ಪಾಗಲಾರದು. ಉದಾಹರಣೆಗೆ ಈಗಿನ ಅಭ್ಯರ್ಥಿಗಳಾಗಿದ್ದ ಅಪ್ಪಚ್ಚು ರಂಜನ್, ಡಾ. ಮಂಥರ್‌ಗೌಡ, ನಾಪಂಡ ಮುತ್ತಪ್ಪ ಎಲ್ಲರೂ ಸೋಮವಾರಪೇಟೆ ಭಾಗದವರೆ ಆಗಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಜೀವಿಜಯ, ಚಂದ್ರಕಲಾ, ರವೀಂದ್ರ, ಡಾ. ನವೀನ್ ಎಲ್ಲರೂ ಸೋಮವಾರಪೇಟೆ ಭಾಗದವರಾಗಿದ್ದು ಇದು ರಾಜಕೀಯದ ತವರೂರಾಗಿದ್ದು, ಮಡಿಕೇರಿ ತಾಲೂಕು ರಾಜಕಾರಣದಲ್ಲಿ ಹಿಂದೆ ಸರಿದಿದೆ.
ಈಗಾಗಲೇ ನಾಮಪತ್ರ ಸಲ್ಲಿಕೆಯಾಗಿದ್ದು ಅಭ್ಯರ್ಥಿಗಳು ನಾಮಪತ್ರದಲ್ಲಿ ತಮ್ಮ ಆಸ್ತಿಯನ್ನು ದಾಖಲಿಸಿದ್ದಾರೆ. ಇತ್ತೀಚೆಗೆ ರಾಜಕೀಯದಲ್ಲಿ ಹಲವಾರು ರಾಜಕಾರಣಿಗಳು ತಮ್ಮ ಅವಧಿ ಮುಗಿಯುವ ಹಂತ ಬಂದಾಗ ತಮ್ಮ ಪುತ್ರರನ್ನು ರಾಜಕೀಯ ಮಂಚೂಣಿಗೆ ತಂದರು. ಕಾಂಗ್ರೆಸ್‌ನ ಖರ್ಗೆಯವರು ತಮ್ಮ ಪುತ್ರನಾದ ಪ್ರಿಯಾಂಕ ಖರ್ಗೆಯನ್ನು, ಯಡಿಯೂರಪ್ಪನವರು ಪುತ್ರನಾದ ವಿಜಯೇಂದ್ರನನ್ನು, ಸಿದ್ದರಾಮಯ್ಯನವರು ಪುತ್ರನಾದ ಡಾ|| ಯತೀಂದ್ರನನ್ನು, ಗುಂಡೂರಾವ್‌ರವರು ಪುತ್ರನಾದ ದಿನೇಶ್ ಗುಂಡೂರಾವ್‌ರನ್ನು ರಾಜಕೀಯ ಮಂಚೂಣಿಗೆ ತಂದರು. ಇಲ್ಲಿ ದಿನೇಶ್ ಗುಂಡೂರಾವ್‌ರವರು ಕೊಡಗಿನಲ್ಲಿ ರಾಜಕೀಯ ನೆಲೆ ಕಾಣದೆ ಬೆಂಗಳೂರಿನಲ್ಲಿ ಸ್ಪರ್ಧಿಸಿ ಸಚಿವರಾದರು, ಎ. ಮಂಜುರವರ ಪುತ್ರ ಡಾ. ಮಂಥರ್‌ಗೌಡ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ, ಎ.ಕೆ. ಸುಬ್ಬಯ್ಯನವರ ಪುತ್ರ ಪೊನ್ನಣ್ಣನವರು ಕಾಂಗ್ರೆಸ್‌ನಿAದ ವೀರಾಜಪೇಟೆಯಿಂದ ಸ್ಪರ್ಧಿಸುತ್ತಿದ್ದಾರೆ.
ಜಿಲ್ಲೆಯ ರಾಜಕಾರಣಿಗಳಾದ ಜೀವಿಜಯ, ಬೆಳ್ಳಿಯಪ್ಪ ಮತ್ತು ಅಪ್ಪಚ್ಚು ರಂಜನ್‌ರವರು ತಮ್ಮ ಮಕ್ಕಳನ್ನು ರಾಜಕೀಯ ಮಂಚೂಣಿಗೆ ತರಲೇ ಇಲ್ಲ. ಬೆಳ್ಳಿಯಪ್ಪ ಮತ್ತು ಜೀವಿಜಯನವರ ಪುತ್ರರು ರಾಜಕೀಯಕ್ಕೆ ಬಂದರೂ ಅದು ಜಿಲ್ಲಾ ಪಂಚಾಯಿತಿ ಸ್ಪರ್ಧೆಗೆ ಮಾತ್ರ ಸೀಮಿತಗೊಂಡಿತ್ತು. ಕೊಡಗಿನ ಸುಂಟಿಕೊಪ್ಪದ ಇಬ್ರಾಹಿಂರವರು ದಕ್ಷಿಣ ಕನ್ನಡದ ವಿಟ್ಲ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಕೊಡಗಿನವರೇ ಆದ ಕೆ.ಜೆ. ಜಾರ್ಜ್ನವರು ಬೆಂಗಳೂರಿನಲ್ಲಿ ರಾಜಕೀಯ ಪ್ರಾರಂಭಿಸಿ ಸಚಿವರಾದರು. ಈ ಇಬ್ಬರೂ ರಾಜಕಾರಣಿಗಳು ಕೊಡಗು ಜಿಲ್ಲೆಯ ಹೊರಗೆ ತಮ್ಮ ರಾಜಕೀಯ ಛಾಪು ಮೂಡಿಸಿದರು.
ಏನಿದ್ದರೂ ಜಿಲ್ಲೆಯಲ್ಲಿ ಚುನಾವಣೆಯ ಕೊನೆಯ ಎರಡು ದಿನಗಳು ಬಹಳ ಮಹತ್ವದ ದಿನಗಳಾಗಿದ್ದು ಏನಾದರೂ ರಾಜಕೀಯ ಅದ್ಬುತಗಳು ಸಂಭವಿಸಬಹುದು. ಮೇ ತಿಂಗಳ ೧೩ರಂದು ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಮತದಾರರು ನಿಟ್ಟುಸಿರು ಬಿಡಬಹುದು. ಕೊನೆಯದಾಗಿ ‘ರಾಜಕೀಯ ಚದುರಂಗದಾಟದಲ್ಲಿ ಜನಮನ ಗೆದ್ದವನೇ ಜನನಾಯಕ’ ನಾಗುತ್ತಾನೆ.
- ಎಂ.ಎ. ಸುಕುಮಾರ, ಐಗೂರು.