*ಗೋಣಿಕೊಪ್ಪ, ಮೇ ೨: ಕಾಡಾನೆ ದಾಳಿಗೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ನೊಖ್ಯ ಗ್ರಾಮದ ಎಡಪಾರೆ ಎಂಬಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಮಲ್ಲಂಗಡ ಸನ್ನಿ ಚಂಗಪ್ಪ (೬೪) ಮೃತಪಟ್ಟ ವ್ಯಕ್ತಿ. ಸೋಮವಾರ ಬೆಳಿಗ್ಗೆ ಹಸುವನ್ನು ಮೇಯಿಸಲೆಂದು ಗದ್ದೆಯೆಡೆಗೆ ತೆರಳಿದ ಸಂದರ್ಭ ಈ ಘಟನೆ ನಡೆದಿದೆ.

ಮನೆಯಿಂದ ಸುಮಾರು ೫೦೦ ಮೀ ದೂರದಲ್ಲಿರುವ ಗದ್ದೆಗೆ ಸನ್ನಿ ಚಂಗಪ್ಪ ಬೆಳಗ್ಗಿನ ಸಮಯ ೭ ಗಂಟೆಗೆ ಹಸುವನ್ನು ಮೇಯಿಸಲೆಂದು ಕರೆದೊಯ್ದಿದ್ದರು. ಮೂರೂವರೆ ಗಂಟೆಗಳ ಕಾಲ ಕಳೆದರೂ, ಮನೆಗೆ ಚಂಗಪ್ಪ ಅವರು ಹಿಂದಿರುಗದೇ ಇರುವುದನ್ನು ಕಂಡು ಚಂಗಪ್ಪ ಅವರ ತೋಟದ ಕಾರ್ಮಿಕ ೧೦.೩೦ ಗಂಟೆಗೆ ಗದ್ದೆಯ ಸಮೀಪ ತೆರಳಿದಾಗ ಗದ್ದೆಯಲ್ಲಿ ಆನೆ ದಾಳಿಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಸನ್ನಿ ಚಂಗಪ್ಪ ಅವರ ದೇಹ ಗೋಚರಿಸಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ತಿತಿಮತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಅಲ್ಲಲ್ಲಿ ಮಾನವನ ಮೇಲೆ ದಾಳಿ ನಡೆಸುವುದು ಕೂಡ ನಡೆಯುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪದೇ ಪದೇ ಎಡವುತ್ತಿದೆ. ಇದರ ಪರಿಣಾಮ ಆನೆ ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ಜಾಗೃತಿ ಆಗಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ಎನ್.ಎನ್. ದಿನೇಶ್