ಕಾರ್ಮಿಕರಿಲ್ಲದೆ ಯಾವ ಕೆಲಸ ಸಾಧ್ಯ ಎಂಬ ಪ್ರಶ್ನೆಯನ್ನು ನಮ್ಮಲ್ಲಿ ನಾವು ಹಾಕಿಕೊಂಡರೆ ಸಾಕು. ಅಭಿವೃದ್ಧಿ ಕಾರ್ಯಗಳಲ್ಲಿ ಕಾರ್ಮಿಕರ ಪಾತ್ರ ಎಷ್ಟು ಮಹತ್ತರವಾಗಿದೆ ಎಂಬುದು ತಿಳಿಯುತ್ತದೆ.
ದೇಶದ ಆಗು ಹೋಗುಗಳಲ್ಲಿ ಕಾರ್ಮಿಕರು, ಸೈನಿಕರು ಹಾಗೂ ರೈತರು ಮುಖ್ಯ ಆಧಾರ ಸ್ತಂಭಗ ಳೆಂದರೆ ತಪ್ಪಾಗಲಾರದು. ಪ್ರತಿಯೊಬ್ಬರ ಕೆಲಸ ಅಥವಾ ಜವಾಬ್ದಾರಿಗಳು ಬೇರೆ ಬೇರೆಯೇ ಆಗಿದ್ದರೂ ಕೂಡ ದೈಹಿಕ ಶ್ರಮದೊಂದಿಗೆ ತಮ್ಮ ಜೀವ ಹಾಗೂ ಜೀವನವನ್ನು ಮುಡಿಪಾಗಿರಿಸಿ ದುಡಿಯುವ ಶ್ರಮಜೀವಿಗಳು ಅವರು.
ಸಮಾಜದ ಉನ್ನತಿ, ಅಭಿವೃದ್ಧಿ, ಬೆಳವಣಿಗೆ ಎಲ್ಲವೂ ಇವರ ಶ್ರಮವನ್ನು ಅವಲಂಬಿತವಾಗಿದೆ. ಕಾರ್ಮಿಕ ವರ್ಗದವರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ಗುರುತಿಸಿ ಕೊಂಡಿದ್ದಾರೆ. ಹಳ್ಳಿಯಿಂದ ಬೃಹತ್ ಪಟ್ಟಣಗಳು ಸೇರಿದಂತೆ ಅವರ ಸೇವೆ ಹಾಗೂ ತ್ಯಾಗದ ವಿನಃ ಯಾವ ಅಭಿವೃದ್ಧಿ ಕಾರ್ಯವು ನೆರವೇರದು. ಕಾರ್ಮಿಕ ನೆಂದರೆ ಮಾನವ ಶಕ್ತಿ. ಯಾವುದೇ ಕ್ಷೇತ್ರವಿರಬಹುದು ಕೃಷಿ, ಕೈಗಾರಿಕೆ, ಕಟ್ಟಡಗಳ ನಿರ್ಮಾಣ. ರಸ್ತೆ ನಿರ್ಮಾಣ, ಹೊಟೇಲ್ ಉದ್ಯಮ, ವಿದ್ಯುತ್ ಕಾರ್ಯಗಾರಗಳು, ಡಾಂಬರೀಕರಣ ಹೀಗೆ ಇದು ವಿಸ್ತಾರವಾಗುತ್ತಾ ಹೋಗುತ್ತದೆ. ಕಾರ್ಮಿಕರ ಬೆವರ ಹನಿ ಸುರಿಯದೆ ಯಾವ ಕೆಲಸ ಕಾರ್ಯಗಳೂ ನೆರವೇರದು ಎಂಬ ಸತ್ಯದ ಅರಿವು ಹೆಚ್ಚು ಕಡಿಮೆ ಎಲ್ಲರಿಗೂ ಇದೆ. ಒಂದು ದಿನ ಕಾರ್ಮಿಕ ಗೈರು ಹಾಜರಾದಾಗ ಎಷ್ಟೇ ಬುದ್ಧಿವಂತ ಅಧಿಕಾರಿಗಳು, ಸಲಹೆಗಾರರು ಹಾಜರಿದ್ದರೂ ಕೆಲಸಗಳು ಮುಂದುವರಿಯದೆAಬುದು ಬಹಿರಂಗ ಸತ್ಯವು ಹೌದು.
ಎಷ್ಟೇ ಆಧುನಿಕ ಉಪಕರಣಗಳು ಎಲ್ಲೆಡೆ ಲಗ್ಗೆ ಇಟ್ಟಿದ್ದರೂ ಕೂಡ ಅದರ ಚಾಲನೆ ಹಾಗೂ ದುರಸ್ತಿ ನಿರ್ವಹಣೆಗೆ ಅನುಭವಿ ಕಾರ್ಮಿಕರು ಬೇಕೇ ಬೇಕು. ಸಹ ಕಾರ್ಮಿಕರು ಅಗತ್ಯವಿದೆ. ಕಾರ್ಮಿಕರನ್ನು ದೈವ ಸ್ವರೂಪಿ ಗಳೆಂದರೂ ತಪ್ಪಾಗಲಾರದು. ಎಂತಹ ಕ್ಲಿಷ್ಟಕರವಾದ ಕೆಲಸವಿದ್ದರೂ ಬಹಳ ಚಾಣಾಕ್ಷತನದಿಂದ ಸುಲಲಿತವಾಗಿ ನಿರ್ವಹಿಸಬಲ್ಲ ನಿಪುಣರಾಗಿರುತ್ತಾರೆ. ಯಾವುದೇ ಹೆಸರಾಂತ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಯದೆ ಅಥವಾ ತರಬೇತಿ ಹೊಂದದೆ ಕೇವಲ ‘ನೋಡಿ ಕಲಿ-ಮಾಡಿ ತಿಳಿ’ ಎಂಬ ತಳಹದಿಯ ಮೇಲೆ ಕೆಲಸವನ್ನು ಮಾಡುತ್ತಲೇ ಕಲಿತು ಕಾರ್ಮಿಕರು ಪ್ರವೀಣರಾಗಿರುತ್ತಾರೆ.
ಅಪ್ರತಿಮ ಸಾಹಸಿಗರು ಜೀವವನ್ನು ಪಣವಾಗಿಟ್ಟು ಎಂತಹ ಅಪಾಯದ ಕೆಲಸವಿರಬಹುದು ಅಥವಾ ಸ್ಥಳಗಳಿರಬಹುದು ಅತೀ ಎತ್ತರದ ಜಾಗಗಳಾಗಲಿ, ಅತೀ ಇಳಿಜಾರಿನ ಪ್ರದೇಶವಿರಲಿ, ಸುರಂಗ ಮಾರ್ಗವಿರಲಿ, ಪಾತಾಳವಿರಲಿ, ಆಮ್ಲಜನಕವೇ ಇಲ್ಲದ ಸ್ಥಳಗಳಾಗ ಬಹುದು, ಕೆಸರು ಗುಂಡಿಯಿರ ಬಹುದು. ಯಾವುದಕ್ಕೂ ಅಂಜದೆ ಕಠಿಣ ಕೆಲಸಗಳನ್ನು ಮಾಡಬಲ್ಲ ಪ್ರಕೃತಿದತ್ತ ಶಕ್ತಿಶಾಲಿಗಳು ಹಾಗೂ ಧೈರ್ಯಶಾಲಿಗಳು ಅವರು.
ನಾವು ತಿನ್ನುವ ಒಂದೊAದು ತಿರುಳು ಆಹಾರ ತಿನಿಸುಗಳಿರಬಹುದು, ಕುಡಿಯುವ ಹನಿ ಹನಿ ನೀರಿರ ಬಹುದು, ವಾಸ ಮಾಡುವ ಮನೆಗಳು, ಪ್ರಯಾಣಿಸುವ ವಾಹನ, ನಡೆಯುವ ರಸ್ತೆ, ಮನೋರಂಜನೆಗಾಗಿ ಹೊಂದಿರುವ ಸಾಧನ ಇತ್ಯಾದಿ ಗಳೆಲ್ಲವೂ ಕಾರ್ಮಿಕ ಶ್ರಮ, ತ್ಯಾಗ ಹಾಗೂ ಪೂರ್ಣ ಸಹಕಾರದಿಂದ ನಿರ್ಮಾಣಗೊಂಡಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಇವರ ಪರಿಶ್ರಮ ನಮ್ಮ ಸೌಕರ್ಯಗಳಿಗೆ ಸಹಕಾರಿಯಾಗಿದೆ.
ಇಂತಹ ನಿಸ್ವಾರ್ಥ ವರ್ಗ ಯಾವುದೇ ಹೆಗ್ಗಳಿಕೆಗೆ ಆಸೆಪಡದೆ ದಿನಗೂಲಿ ಬಿಟ್ಟರೆ ಹೆಚ್ಚಿನ ಯಾವುದೇ ಅಭಿಲಾಷೆ ಹೊಂದಿರದೆ ಸಂತೃಪ್ತಿ ಯಿಂದ ‘ಹಾಸಿಗೆಯಿದ್ದಷ್ಟು ಕಾಲು ಚಾಚು’ ಎಂಬ ಉಕ್ತಿಯನ್ನು ಬಹುವಾಗಿ ಜೀವನದಲ್ಲಿ ಅಳವಡಿಸಿ ಕೊಂಡು ತೃಪ್ತಿ ಕಾಣುವವರೇ ಹೆಚ್ಚು. ಮನೆ ಮಂದಿಯೆಲ್ಲ ದುಡಿಮೆಯನ್ನೇ ನಂಬಿಕೊAಡು ತಮ್ಮ ರಟ್ಟೆಯ ಬಲದಿಂದಲೇ ಬಾಳ ಬಂಡಿ ಎಳೆಯುವ ಮಂದಿ ಇವರು. ಪುರುಷರು, ಮಹಿಳೆಯರೆನ್ನದೆ ಎಲ್ಲರೂ ಬಾಳ ರಥವೆಳೆಯಲು ಕೈಜೋಡಿಸುತ್ತಾರೆ. ಹಿರಿಯರು, ಗರ್ಭಿಣಿಯರು, ಬಾಣಂತಿ ಹೆಣ್ಣು ಮಕ್ಕಳು ಕೆಲಸ ಮಾಡುತ್ತಾ ಸಂಸಾರದ ಆರ್ಥಿಕ ಮುಗ್ಗಟ್ಟನ್ನು ನೀಗಿಸುವಲ್ಲಿ ಸಹಕರಿಸುತ್ತಾರೆ. ಅವರ ಅನ್ನ ಅವರೇ ಸ್ವತಃ ಸಂಪಾದಿಸಿಕೊAಡು ಬದುಕುವ ಮಂದಿಯವರು.
ಸಮಾಜದ ಅಭಿವೃದ್ಧಿಯಲ್ಲಿ ಸ್ವಚ್ಛತೆಯು ಬಹಳ ಮುಖ್ಯವಾದದು. ರೋಗ ಮುಕ್ತ ಸಮಾಜವಿರಬೇಕೆಂದರೆ ಪೌರಕಾರ್ಮಿಕರ ಪಾತ್ರ ಬಹಳ ಹಿರಿದು. ತಾವು ರೋಗ ರುಜನಗಳಿಗೆ ತುತ್ತಾದರೂ ಲೆಕ್ಕಿಸದೆ ಸಮಾಜದ ನಮ್ಮ ನಿಮ್ಮೆಲ್ಲರ ಸ್ವಾಸ್ತö್ಯಕ್ಕಾಗಿ ಮಲ, ಮೂತ್ರ, ತ್ಯಾಜ್ಯ, ಹೇಸಿಗೆ, ದುರ್ನಾತಗಳನ್ನು ಲೆಕ್ಕಿಸದೆ ಬಳಿದು ಹಸನು ಮಾಡುವ ಸದ್ಭಾವಿಗಳು. ಒಂದುಕ್ಷಣ ಇವರುಗಳ ಗೈರು ಹಾಜರಿಯನ್ನು ನೆನಸಿಕೊಂಡಾಗ ದೇಶದ ಅಥವಾ ವಿಶ್ವದ ಪರಿಸ್ಥಿತಿ ಏನಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸದೆಯಿರದು.
ಕೋಟಿ ಕೋಟಿ ಹಣ ಸುರಿದು ಕೈಗೊಂಡ ಕಾರ್ಯಗಾರಗಳು ಕಾರ್ಮಿಕರ ಕೊರತೆಯಿಂದ ತುಕ್ಕು ಹಿಡಿಯುವುದನ್ನೂ ನಾವು ನೋಡಿರುತ್ತೇವೆ. ಎಲ್ಲಾ ಅಭಿವೃದ್ಧಿ ಕಾರ್ಯಗಳು ಕಾರ್ಮಿಕರೆಂಬ ಅಸಾಮಾನ್ಯರೆ ದುಡಿಮೆ, ಶ್ರಮ ಹಾಗೂ ನೈಪುಣ್ಯತೆಯನ್ನು ಅವಲಂಬಿಸಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿರ ಬಹುದು, ಸಮಾರಂಭಗಳಿರಬಹುದು ಕಾರ್ಮಿಕರ ಸಹಕಾರವಿರದೆ ಪರಿಪೂರ್ಣವಾಗಲಾರದು ಎಂಬ ಮನವರಿಕೆ ಎಲ್ಲರಲ್ಲೂ ಇರಬೇಕು. ಸಮಾಜ ಅವರುಗಳಿಗೆ ಸದಾ ಕೃತಜ್ಞರಾಗಿರಬೇಕು. ಅವರ ಉನ್ನತಿ ಹಾಗೂ ಸೌಕರ್ಯಕ್ಕಾಗಿ ಆಯೋಜಿಸುವ ಕಾರ್ಯಕ್ರಮಗಳು, ಯೋಜನೆಗಳು ಕೂಡ ಸಮಾಜದ ಅಭಿವೃದ್ಧಿಯ ಒಂದು ಅಂಗವೆAಬ ಅರಿವಿರಬೇಕು. ಯಾವುದೇ ಅನ್ಯಾಯವೆಸಗದ ಸಜ್ಜನರು, ಅವರಿಗಾಗಿ ಆರೋಗ್ಯ ವಿಮೆ, ಮಾಷಾಸನ, ಕೆಲಸದ ವೇಳೆ ಉಂಟಾದ ಅನಾಹುತ, ಅಂಗವಿಕಲತೆ ಹಾಗೂ ಸಾವು-ನೋವುಗಳಿಗೆ ಸರಿಯಾದ ಪರಿಹಾರ ಒದಗಿಸುವುದು ಎಲ್ಲರ ಕರ್ತವ್ಯವಾಗಿದೆ. ಅವರುಗಳು ಕಾಡಿ, ಬೇಡಿ, ಮುಷ್ಕರ ಹೂಡಿ, ಹೋರಾಡಿ ಪಡೆದುಕೊಳ್ಳುವುದನ್ನು ನೋಡಿದಾಗ ಕೊಳ್ಳೆ ಹೊಡೆಯುವ ಧುರೀಣರು, ಅಧಿಕಾರಿ ವರ್ಗದವರಿಗೆ ನಾಚಿಕೆಯಾಗಬೇಕು. ಕಾರ್ಮಿಕರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ವಿಳಂಬವಿಲ್ಲದAತೆ ನೋಡಿಕೊಳ್ಳಬೇಕು. ಕೇವಲ ಕೂಲಿ ಕೊಟ್ಟು ಕೈತೊಳೆದುಕೊಳ್ಳುವ ಮನೋಭಾವನೆ ಬದಲಾಗಬೇಕು. ಯಾವುದೇ ಹೆಚ್ಚಿನ ಪ್ರತಿಫಲ ಬಯಸದ ಮುಗ್ದರ ಪ್ರತಿಭೆಯನ್ನು ಹಾಗೂ ಸೇವೆ, ತ್ಯಾಗಗಳನ್ನು ಗುರುತಿಸಿ ಸನ್ಮಾನ, ಪುರಸ್ಕಾರಗಳನ್ನೂ ನೀಡು ವಂತಾಗಬೇಕು.
- ಕೆ. ಶೋಭ ರಕ್ಷಿತ್, ಮಡಿಕೇರಿ.
ಮೊ. ೯೮೪೫೪೯೭೪೪೮.