ಮಡಿಕೇರಿ, ಏ. ೩೦: ನಿನ್ನೆ ದಿನ ಮಡಿಕೇರಿಗೆ ಬಿಜೆಪಿ ಪರವಾಗಿ ರೋಡ್ ಶೋಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಡಗಿನಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ ಎಂದು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಕೊಡಗಿನಲ್ಲಿ ಈ ಬಾರಿ ಬದಲಾವಣೆ ಖಚಿತ ಎಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರಕಾರದ ಮೂವತ್ತಕ್ಕೂ ಅಧಿಕ ಶಾಸಕರುಗಳ ಮೇಲೆ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಬಿಜೆಪಿಯ ನೈಜ ಸಿದ್ಧಾಂತ ಏನೆಂಬುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಅವರುಗಳೇ ಬಯಲು ಮಾಡಿದ್ದಾರೆ. ಜಿಲ್ಲೆಯಲ್ಲಿ ಮತದಾರರು ಬದಲಾವಣೆ ಬಯಸಿದ್ದು, ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿದ್ದು, ಈ ಬಗ್ಗೆ ಹಲವಾರು ದೂರುಗಳನ್ನು ಕಾಂಗ್ರೆಸ್ ದಾಖಲು ಮಾಡಿದೆ. ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಹೇಳುವ ವೀರಾಜಪೇಟೆ ಶಾಸಕರು ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಶ್ರೀಕಂಠಯ್ಯ ಅವರನ್ನು ಸರಕಾರದ ಮೇಲೆ ಒತ್ತಡ ಹೇರಿ ಮತ್ತೆ ಕೊಡಗಿಗೆ ಕರೆಸಿಕೊಂಡರು ಎಂದು ಸಂಕೇತ್ ಪೂವಯ್ಯ ದೂರಿದರು.
ಬೋಪಯ್ಯ ಅವರು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ನೀಡಿರುವ ಬಗ್ಗೆ ಮತದಾರರಿಗೂ ಮಾಹಿತಿ ಇದ್ದು, ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯೆ ಪ್ರೇಮಾ ಕಾರ್ಯಪ್ಪ ಮಾತನಾಡಿ, ಅಭಿವೃದ್ಧಿಗೆ ಒತ್ತು ನೀಡಿದ ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಟಿಪ್ಪು ಜಯಂತಿಯನ್ನು ಮುಂದಿಟ್ಟುಕೊAಡು ಅಖಾಡಕ್ಕಿಳಿಯುತ್ತದೆ. ಟಿಪ್ಪು ಜಯಂತಿ ಮುಗಿದ ಅಧ್ಯಾಯವಾಗಿದ್ದು, ಹಳೆಯ ವಿಚಾರಗಳನ್ನು ಕೆದಕುತ್ತಾ ಚುನಾವಣೆ ಎದುರಿಸುವ ಬದಲು ತಾವೇನು ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ಬಿಜೆಪಿ ಶಾಸಕರು ಬಹಿರಂಗಪಡಿಸಲಿ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿಯ ಆಡಳಿತ ವೈಫಲ್ಯವೇ ಕಾಂಗ್ರೆಸ್ನ ಪ್ರಾಬಲ್ಯವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಇಲ್ಲಿನ ಶಾಸಕರುಗಳು ವಿಫಲವಾಗಿದ್ದು, ಜಿಲ್ಲೆಯ ಅಭಿವೃದ್ಧಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಕೆ.ಬಿ. ಶಾಂತಪ್ಪ ಮಾತನಾಡಿ, ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ಬಿಟ್ಟು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲಿ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೆಚ್.ಎಂ. ನಂದಕುಮಾರ್, ಎಂ.ಯು. ಮಹಮ್ಮದ್ ಉಪಸ್ಥಿತರಿದ್ದರು.