ಪೊನ್ನಂಪೇಟೆ, ಏ. ೨೯: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದ ಶ್ರೀ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುಮಾರು ೮೦೦ ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಶ್ರೀ ಮಾರಿಯಮ್ಮ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಏಪ್ರಿಲ್ ೧೮ ರ ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲನ್ನು ತೆರೆಯುವ ಮೂಲಕ ಊರು ಕಟ್ಟು ಹಾಕಲಾಯಿತು.
ಏಪ್ರಿಲ್ ೨೫ ಮತ್ತು ೨೬ ರಂದು ದೇವಿಯ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಾರಿಯಮ್ಮ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ದೇವಿಯ ಅವಭೃತ ಸ್ನಾನಕ್ಕೂ ಮುನ್ನ ಗಾಳಿಯಲ್ಲಿ ಗುಂಡು ಹೊಡೆದು, ಅನ್ನಕ್ಕೆ ಅಕ್ಕಿ ಹಾಕಲಾಯಿತು. ಉತ್ಸವದ ಅಂಗವಾಗಿ ಭಕ್ತಾಧಿಗಳು ಉಪವಾಸ ವೃತವನ್ನು ಆಚರಿಸುವುದು ಇಲ್ಲಿನ ಪದ್ಧತಿಯಾಗಿದ್ದು, ಬಳಿಕ ಅಕ್ಕಿಮುದ್ದೆ ಹಾಗೂ ಅವರೆಕಾಳು ಸಾರಿನ ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾಣಯ್ಯ, ಕಾರ್ಯದರ್ಶಿ ಚಿಮ್ಮಣಮಾಡ ರಾಜ, ದೇವತಕ್ಕರಾದ ಕೊಟ್ಟಂಗಡ ಪೆಮ್ಮಯ್ಯ, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು. ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಬಲ್ಯಮುಂಡೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.