ವೀರಾಜಪೇಟೆ, ಏ. ೩೦: ರಾಜಕೀಯ ಎಂಬುದು ಪರಮಪವಿತ್ರವಾದುದು. ದ್ವೇಷ ರಾಜಕಾರಣ, ವ್ಯಕ್ತಿಯ ತೇಜೋವಧೆ ಮಾಡುವುದು ಹಾಗೂ ಧರ್ಮ ಜಾತಿಗಳ ಮಧ್ಯೆ ಕಂದಕ ಸೃಷ್ಟಿ ಮಾಡಿ ರಾಜಕೀಯ ಮಾಡುವುದು ಭಾ.ಜ.ಪ ಮತ್ತು ಹಿಂದೂಪರ ಸಂಘಟನೆಗಳಿಗೆ ಶೋಭೆ ತರುವ ವಿಷಯವಾಗಬಾರದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ ಅವರು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪೊನ್ನಣ್ಣ ಅವರ ಮೇಲೆ ದ್ವೇಷ ಸಾಧನೆ ಮತ್ತು ವ್ಯಕ್ತಿಯ ತೇಜೋವಧೆ ಮಾಡುವ ನಿಟ್ಟಿನಲ್ಲಿ ಅಡ್ಡಂಡ ಕಾರ್ಯಪ್ಪ ಅವರು ಕೆಲವು ವಿಡೀಯೋ ತುಣುಕುಗಳನ್ನು ಹರಿಯಬಿಟ್ಟಿದ್ದಾರೆ. ವಿದ್ಯಾರ್ಥಿಗಳ ಘಟನೆಗೆ ರಾಜಕೀಯ ಬಣ್ಣ ಬಳೆದು ಕೊಡವ ಮತ್ತು ಇತರ ಧರ್ಮಗಳ ಮಧ್ಯೆ ಕೋಮು ಗಲಭೆಯನ್ನು ಸೃಷ್ಟಿ ಮಾಡುವ ರೀತಿಯಲ್ಲಿ ವಸಂತ ಎಂಬವರು ಸಂದೇಶ ರವಾನೆ ಮಾಡಿದ್ದಾರೆ. ಜಾಲತಾಣದ ಮೂಲಕ ಸಂದೇಶಗಳನ್ನು ಹರಿಯಬಿಟ್ಟಿರುವುದು ಕಿಚ್ಚಿನ ರಾಜಕೀಯ ಎಂದು ಆರೋಪಿಸಿದರು.

ವ್ಯಕ್ತಿಯನ್ನು ಅವಹೇಳನ ಮಾಡುವಂತೆ ತೇಜೋವಧೆ ದೃಷ್ಟಿಯಲ್ಲಿ ಚಿತ್ರಿಸಿ ಪ್ರದರ್ಶನ ಮಾಡುವುದು ಆ ಪಕ್ಷಕ್ಕೆ ಮತ್ತು ಸಂಘಟನೆಗಳಿಗೆ ಧÀಕ್ಕೆಯಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮತ್ತು ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹಾಜರಿದ್ದರು.