ಮಡಿಕೇರಿ, ಏ. ೩೦: ರಾಜಕೀಯ ಜೀವನದಲ್ಲಿ ಕ್ಷೇತ್ರದ ಜನತೆಗೆ ಸ್ಪಂದಿಸಿ ಕೆಲಸ ನಿರ್ವಹಿಸಿರುವುದು, ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ತಮ್ಮ ಈ ಬಾರಿಯ ಗೆಲುವಿಗೆ ಪೂರಕವಾಗಲಿವೆ. ರಾಜಕೀಯಕ್ಕೆ ಬಂದ ಬಳಿಕ ಎಲ್ಲಾ ಬಾರಿಯ ಸ್ಪರ್ಧೆಯಲ್ಲೂ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದ್ದೇನೆ ವಿನಹ ಕಳೆದುಕೊಂಡಿಲ್ಲ. ಇದು ಜನರು ತಮ್ಮ ಮೇಲೆ ಇಟ್ಟಿರುವ ಸಾಕ್ಷಿಯಾಗಿದ್ದು, ಈ ಬಾರಿಯ ಸ್ಪರ್ಧೆಯಲ್ಲೂ ಜಯಗಳಿಸಲಿರುವುದಾಗಿ ಮಡಿಕೇರಿ ಕ್ಷೇತ್ರದ ಹಾಲಿ ಶಾಸಕ ಈ ಬಾರಿಯ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹೇಳಿದರು.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಹಿಂದೊಮ್ಮೆ ಸಣ್ಣ ಅಂತರದ ಮತದ ಸೋಲು ಹೊರತುಪಡಿಸಿದರೆ ಆರು ಬಾರಿಯ ಸ್ಪರ್ಧೆಯಲ್ಲಿ ತಮಗೆ ಜನರ ಮತ ಹೆಚ್ಚಾಗುತ್ತಲೇ ಬಂದಿದೆ. ಇದೀಗ ಏಳನೇ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದು, ಬಿಜೆಪಿಗೆ ಎದುರಾಳಿಗಳೇ ಇಲ್ಲ ಎಂಬ ದೃಢವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಮಟ್ಟದಲ್ಲಾಗಲಿ, ಕೊಡಗು ಜಿಲ್ಲೆಯಲ್ಲಾಗಲಿ ಬಿಜೆಪಿಗೆ ಯಾವುದೇ ಧಕ್ಕೆಯಾಗಿಲ್ಲ. ರಾಜ್ಯದಲ್ಲಿ ಕೆಲವು ಬಿಜೆಪಿ ಮುಖಂಡರು ಪಕ್ಷ ತ್ಯಜಿಸಿರುವುದು ಪಕ್ಷದ ವರ್ಚಸ್ಸಿಗೆ ಏನೂ ಸಮಸ್ಯೆಯಾಗದು. ಕೊಡಗಿನಲ್ಲೂ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಮತ್ತೆ ಸರಕಾರ ಬರಲಿದೆ ಎಂದರು.
ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವವರು ಕಾಂಗ್ರೆಸ್ನ ಬೆಂಬಲಿಗರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇದನ್ನು ದಾಳವಾಗಿ ಬಳಸಲು ಯತ್ನಿಸುತ್ತಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ರಂಜನ್ ಹೇಳಿದರು.
ಕೊಡಗಿನಲ್ಲಿ ಎಂದೂ ಜಾತೀಯ ಆಧಾರದ ಚುನಾವಣೆ ನಡೆದಿಲ್ಲ. ಕಳೆದ ಹಲವು ವರ್ಷಗಳಿಂದ ಕೊಡವ ಜನಾಂಗದ ಪ್ರಾಬಲ್ಯ ಇರುವ ವೀರಾಜಪೇಟೆ ಕ್ಷೇತ್ರದಲ್ಲಿ ಕೆ.ಜಿ. ಬೋಪಯ್ಯ ಹಾಗೂ ಗೌಡ ಜನಾಂಗದ ಪ್ರಾಬಲ್ಯ ಇರುವ ಮಡಿಕೇರಿ ಕ್ಷೇತ್ರದಲ್ಲಿ ತಮ್ಮನ್ನು ಜನರು ಚುನಾಯಿಸಿರುವುದು ಇದಕ್ಕೆ ಸಾಕ್ಷಿಯಾಗಿದ್ದು, ಇದು ಈ ಬಾರಿಯೂ ಮುಂದುವರಿಯಲಿದೆ ಎಂದರು.
ಮಡಿಕೇರಿ ನಗರವನ್ನು ತಾವು ಎಂದೂ ನಿರ್ಲಕ್ಷö್ಯ ಮಾಡಿಲ್ಲ. ಇಲ್ಲಿ ತಮ್ಮ ಪಕ್ಷದ ಆಡಳಿತವೇ ಇದ್ದು, ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಕಳೆದ ಎರಡು ವರ್ಷ ಮಳೆ-ಕೋವಿಡ್ ಕಾರಣದಿಂದ ಸ್ವಲ್ಪ ಹಿನ್ನಡೆಯಾಗಿದ್ದು, ಹಲವಷ್ಟು ಕೆಲಸ ಪ್ರಗತಿಯಲ್ಲಿರುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ಆರೋಪ ಮಾಡುತ್ತಿರುವ ಕಾಂಗ್ರೆಸ್ ಈ ಹಿಂದೆ ತನ್ನ ಆಡಳಿತದಲ್ಲಿ ಏನು ಮಾಡಿದೆ ಎಂದು ಕುಟುಕಿದರು. ಬಿಜೆಪಿಯಿಂದ ಸ್ಪೆಷಾಲಿಟಿ ಆಸ್ಪತ್ರೆ, ವಿಶ್ವವಿದ್ಯಾನಿಲಯ, ರಾಜಾಸೀಟ್ ಸೇರಿದಂತೆ ಪ್ರವಾಸಿತಾಣಗಳ ಅಭಿವೃದ್ಧಿ, ರಸ್ತೆ ಸೇರಿದಂತೆ ೧೮೦೦ ಕೋಟಿಗಳ ಯೋಜನೆ ಅನುಷ್ಠಾನಗೊಂಡಿದೆ. ಕುಶಾಲನಗರ ತಾಲೂಕು ಘೋಷಣೆ ಮಾಡಿದ್ದು, ಇದರ ಕೆಲಸ ಹಂತಹAತವಾಗಿ ನಡೆಯುತ್ತಿದೆ. ಮಡಿಕೇರಿಯಲ್ಲಿ ಮಿನಿ ವಿಧಾನಸೌಧವೂ ತಲೆ ಎತ್ತಲಿದೆ. ಸಾವಿರಾರು ಬಡಜನರಿಗೆ ನಿವೇಶನ, ಹಕ್ಕುಪತ್ರ ಕಲ್ಪಿಸಲಾಗಿದೆ. ಎಲ್ಲವೂ ಒಂದೇ ಬಾರಿಗೆ ಸಾಧ್ಯವಾಗದು ಮುಂದೆಯೂ ಸಾಕಷ್ಟು ಚಿಂತನೆಗಳಿವೆ ಎಂದರು.
ವಿವಿಧ ಅಭಿವೃದ್ಧಿ ನಿಗಮಗಳ ರಚನೆ, ಮೀಸಲಾತಿ ನೀಡಿರುವುದನ್ನು ಅವರು ಉಲ್ಲೇಖಿಸಿ ಕಾಂಗ್ರೆಸ್ ಕೇವಲ ಮತಬ್ಯಾಂಕ್ ರಾಜಕೀಯ ಮಾಡುತ್ತಿತ್ತು. ಆದರೆ, ಬಿಜೆಪಿ ಸರ್ವರನ್ನೂ ಸಮಾನವಾಗಿ ಕಾಣುತ್ತಿದೆ. ಇದೀಗ ಕಾಂಗ್ರೆಸ್ ಘೋಷಿಸಿರುವ ಹಲವು ‘ಗ್ಯಾರಂಟಿ’ಗಳನ್ನು ನೀಡಲು ಸಾಧ್ಯವೇ ಆಗದು ಎಂದರು.
ದೇಶದ್ರೋಹಿ ಸಂಘಟನೆಗಳನ್ನು ಬಿಜೆಪಿ ಎಂದಿಗೂ ವಿರೋಧಿಸುತ್ತದೆ. ಈ ಹಿನ್ನೆಲೆಯಲ್ಲೇ ಪಿಎಫ್ಐಯನ್ನು ನಿಷೇಧ ಮಾಡಿದೆ ಎಂದು ಅವರು ಹೇಳಿದರು.
ಸಂಘ ಪರಿವಾರದವರು ತಮ್ಮ ಹಾಗೂ ಪಕ್ಷದ ಪರ ಇದ್ದಾರೆ. ದೇಶದ ಪ್ರಧಾನಿ ವಿಶ್ವದ ಅಗ್ರಗಣ್ಯ ನಾಯಕರಾಗಿದ್ದು, ಅವರ ಹೆಸರಿನಲ್ಲಿ ಚುನಾವಣೆ ಎದುರಿಸುವುದರಲ್ಲಿ ತಪ್ಪೇನಿದೆ. ಅವರು ನಮ್ಮ ನಾಯಕರು ಎಂದರು.
ಹಲವಷ್ಟು ಸಮಸ್ಯೆಗಳಿಗೆ ಬಿಜೆಪಿ ಸರಕಾರವೇ ಪರಿಹಾರ ಎಂಬುದು ಜನತೆಗೆ ಅರಿವಿದೆ. ಪಕ್ಷ ಎಲ್ಲರನ್ನೂ ಸಮಾನವಾಗಿ ಕಂಡರೂ ದೇಶದ್ರೋಹಿಗಳನ್ನು ದೂರವಿಡಲಿವೆ ಎಂದು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರಾಗಿದ್ದು, ಈ ಬಗ್ಗೆ ಕಾಂಗ್ರೆಸ್ಸಿಗರಲ್ಲಿಯೇ ಬೇಸರವಿದೆ. ಇವರು ಪ್ರತಿನಿಧಿಸಿದ್ದ ಅರಕಲಗೂಡಿನ ಜನರು ಹಲವು ಅಗತ್ಯತೆಗಳಿಗೆ ಕೊಡಗಿಗೆ ಬರುತ್ತಿದ್ದಾರೆ. ಈ ಅಭ್ಯರ್ಥಿಯಿಂದ ಎನು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದ ಅವರು, ಜೆಡಿಎಸ್ ಕೂಡ ಪ್ರತಿಸ್ಪರ್ಧಿಯಾಗದು ಎಂದು ಬಿಜೆಪಿ ಗೆಲುವಿನ ವಿಶ್ವಾಸದ ನುಡಿಯನ್ನಾಡಿದರು.
-ಕಾಯಪಂಡ ಶಶಿ ಸೋಮಯ್ಯ