ಮಡಿಕೇರಿ, ಏ. ೨೮: ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳ ಬಗ್ಗೆ ಜಿಲ್ಲೆಯ ಶಾಸಕರುಗಳು ನೀಡುತ್ತಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ. ಸುರೇಶ್, ಜಿಲ್ಲೆಯ ಇಬ್ಬರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ವಿದ್ಯಾವಂತರಿದ್ದಾರೆ. ಜನಪರ ಕಾಳಜಿ ಉಳ್ಳವರಾಗಿ ಸ್ಥಳೀಯರಾಗಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಗೆದ್ದ ನಂತರ ಬಿಜೆಪಿ ಶಾಸಕರುಗಳ ಹೇಳಿಕೆಯಂತೆ ಜನರು ಬೆಂಗಳೂರಿಗೆ ಹೋಗ ಬೇಕಾಗಿಲ್ಲ. ಸ್ವಕ್ಷೇತ್ರದಲ್ಲೇ ಜನಸಾಮಾನ್ಯ ರಿಗೆ ಸಿಗುತ್ತಾರೆ. ಕೊಡಗು ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಡಾ. ಮಂಥರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ಅವರು ಗೆಲುವು ಅನಿವಾರ್ಯ ವಾಗಿದೆ ಎಂದು ಹೇಳಿದರು.

ಈ ಚುನಾವಣೆ ಕರ್ನಾಟಕಕ್ಕೆ ಬಹಳ ಮಹತ್ವ ಪೂರ್ಣವಾದದ್ದು, ಬಿಜೆಪಿ ನೇತೃತ್ವದ ಸರ್ಕಾರದಿಂದ ಅಡುಗೆ ಅನಿಲದ ದರ ರೂ. ೪೫೦ ಇದ್ದದ್ದು ಒಂಬತ್ತು ವರ್ಷಗಳಲ್ಲಿ ರೂ. ೧೧೫೦ ತಲುಪಿದೆ. ಕೂಲಿ ಕಾರ್ಮಿಕರು ಗ್ಯಾಸ್ ಬಳಸಲಾಗದ ಸ್ಥಿತಿಗೆ ತಲುಪಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ದಿನಬಳಕೆಯ ಪ್ರತಿಯೊಂದು ವಸ್ತುಗಳು ಗಗನಕ್ಕೇರಿ ಜನಸಾಮಾನ್ಯರು ಚಿಂತಾಜನಕ ಸ್ಥಿತಿಯಲ್ಲಿ ಬದುಕು ನಿರ್ವಹಿಸುವಂತಾಗಿದೆ ಎಂದು ಆರೋಪಿಸಿದರು.

ಕೊಡಗು ಜಿಲ್ಲೆ ಅಭಿವೃದ್ಧಿ ಕಾಣದೆ ಹಾಳು ಕೊಂಪೆಯಾಗಿದೆ. ಶಾಸಕರು ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದೆ ತಮ್ಮ ಜವಾಬ್ದಾರಿಯನ್ನು ಮರೆತಿರುವುದರಿಂದ ಜಿಲ್ಲೆಯ ಮತದಾರರು ಸ್ವಾಭಾವಿಕವಾಗಿ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.ರಂಗಾಯಣದ ಜವಾಬ್ದಾರಿ ಹೊತ್ತಿರುವ ಅಡ್ಡಂಡ ಕಾರ್ಯಪ್ಪ ಅವರು ಕಾಂಗ್ರೆಸ್‌ಗೆ ಮತ ನೀಡುವ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು ಖಂಡನೀಯ ಎಂದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಬಾವ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಲ್ ಬಾಷ, ಗೆಜ್ಜೆಹಣಕೋಡು ಬೂತ್ ಅಧ್ಯಕ್ಷ ಹೆಚ್.ಕೆ. ಮಹೇಶ್, ಪಿ.ಪಿ. ರವಿ, ಎಂ. ಆಲಿ ಇದ್ದರು.