ಮಡಿಕೇರಿ, ಏ. ೨೮: ಬಿಜೆಪಿ ಸರ್ಕಾರದಿಂದ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಕೃಷಿ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹೇಳಿದರು.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ೮ ವರ್ಷಗಳ ಮೋದಿ ಸರಕಾರದ ಅವಧಿಯಲ್ಲಿ ನಮ್ಮ ರೈತರ ಜೀವನ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ನೇರ ನಗದು ಪಾವತಿ ಮೂಲಕ ರೈತರಿಗೆ ಹಣಕಾಸಿನ ನೆರವು ನೀಡಲಾಗಿದೆ. ಹೆಚ್ಚಿನ ಇಳುವರಿ ಪಡೆಯಲು ಮಣ್ಣಿನ ಪರೀಕ್ಷೆ ಮಾಡಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರಕಾರದಿಂದ ರೂ. ೬೦೦೦ ಮತ್ತು ರಾಜ್ಯ ಸರಕಾರದಿಂದ ರೂ. ೪೦೦೦ ಸೇರಿದಂತೆ ಒಟ್ಟು ರೂ. ೧೦೦೦೦ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಅರ್ಹ ರೈತರಿಗೆ ನೀಡಲಾಗಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯೂರಿಯವನ್ನು ಖಾಸಗಿ ಕೈಗಾರಿಕೆಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರಿಂದ ರೈತರು ಸಂಕಷ್ಟಕ್ಕೀಡಾದರು ಎಂದು ದೂರಿದ ಅವರು ಕಾಳಸಂತೆಯಲ್ಲಿ ಯೂರಿಯಾದ ಮಾರಾಟವನ್ನು ಕೊನೆಗೊಳಿಸಿ, ರಸಗೊಬ್ಬರಗಳಲ್ಲಿನ ರಾಸಾಯನಿಕ ಅಂಶವನ್ನು ಕಡಿಮೆ ಮಾಡಲು ಮೋದಿ ಸರ್ಕಾರವು ಬೇವು ಲೇಪಿತ ಯೂರಿಯವನ್ನು ಪರಿಚಯಿಸಿತು. ಇದು ಮಣ್ಣಿನ ಆರೋಗ್ಯವನ್ನು ಸುಧಾರಿಸಿದ್ದಲ್ಲದೆ, ದೇಶದ ರೈತರ ಆದಾಯವನ್ನು ಹೆಚ್ಚಿಸಲು ನೆರವಾಯಿತು. ಕಳೆದ ಮೂರು ವರ್ಷಗಳಲ್ಲಿ ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಬ್ಸಿಡಿ ನೀಡಲು ರೂ. ೫೨,೯೫೦ ಕೋಟಿ ಒದಗಿಸಲಾಗಿದೆ. ರೈತ ಶಕ್ತಿ ಯೋಜನೆಯಡಿ ರೂ. ೪೦೦ ಕೋಟಿ ಡೀಸೆಲ್ ಸಬ್ಸಿಡಿ ನೀಡಿದೆ. ಬೀಜ, ರಸಗೊಬ್ಬರ ಮತ್ತು ಕೀಟನಾಶಗಳನ್ನು ಖರೀದಿಸಲು ಈ ವರ್ಷದ ರಾಜ್ಯ ಬಜೆಟ್‌ನಲ್ಲಿ ಭೂಸಿರಿ ಯೋಜನೆಯಡಿ ಪ್ರತಿ ರೈತರಿಗೆ ರೂ. ೧೦೦೦೦ ಹೆಚ್ಚುವರಿ ಸಹಾಯಧನವನ್ನು ಘೋಷಿಸಿದೆ ಎಂದು ನಾಗೇಶ್ ಕುಂದಲ್ಪಾಡಿ ತಿಳಿಸಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಸುಮಾರು ೧೧ ಲಕ್ಷ ರೈತರು, ಭೂರಹಿತ ಕಾರ್ಮಿಕರು ಮತ್ತು ಇತರರ ಮಕ್ಕಳಿಗೆ ೭೨೫ ಕೋಟಿ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದೆ. ರಾಜ್ಯ ಸರಕಾರ ೨೦೨೩-೨೪ನೇ ರಾಜ್ಯ ಬಜೆಟ್‌ನಲ್ಲಿ ರೈತರಿಗೆ ರೂ. ೨೫೦೦೦ ಕೋಟಿ ಸಾಲವನ್ನು ಘೋಷಿಸಲಾಗಿದೆ. ರಾಜ್ಯದ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ರೂ. ೫ ಪ್ರೋತ್ಸಾಹಧನ, ಮಹಾತ್ವಾಕಾಂಕ್ಷಿ ‘ಯಶಸ್ವಿನಿ’ ಯೋಜನೆ ಮರು ಜಾರಿಗೆ ರೂ. ೧೦೭೮ ಕೋರಿ ಕಾಯ್ದಿಸಿದ್ದು, ರೂ. ೭೯೯ ಕೋಟಿ ಬಿಡುಗಡೆಗೊಳಿಸಲಾಗಿದೆ. ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ೭೫೦ ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪ, ಸೌರ ವಿದ್ಯುತ್, ಕುಡಿಯುವ ನೀರು, ಡಿಜಿಟ್ ಲೈಬ್ರರಿ, ೭೫೦ ಗ್ರಾಮ ಪಂಚಾಯಿತಿಗಳಲ್ಲಿ ಆಶ್ರಯ ರಹಿತರನ್ನು ಗುರುತಿಸಿ ವಸತಿ ಕಲ್ಪಿಸುವ ಯೋಜನೆಯೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರಧನಗಳನ್ನು ಹೆಚ್ಚಿಸಲಾಗಿದೆ. ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಜಿಲ್ಲೆಯಲ್ಲಿ ೫೩೮ ಮನೆಗಳ ನಿರ್ಮಾಣವಾಗಿದೆ. ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ೨೦೦೦೦ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಡಿ ೧,೦೨,೬೫೨ ಆರೋಗ್ಯ ಕಾರ್ಡುಗಳ ವಿತರಣೆಯಾಗಿದೆ. ಕೊಡಗು ಜಿಲ್ಲೆಗೆ ಈ ವರ್ಷದಲ್ಲಿ ಮಳೆಹಾನಿ ಪರಿಹಾರಕ್ಕೆ ಸುಮಾರು ರೂ. ೧೩೦ ಕೋಟಿಯಷ್ಟು ರೈತರಿಗೆ ಬಿಡುಗಡೆಯಾಗಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕೊಡಗಿನಲ್ಲಿ ಜಯಗಳಿಸಲಿದ್ದಾರೆ ಎಂದರು. ಕೃಷಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಯಮುನಾ ಚಂಗಪ್ಪ ಮಾತನಾಡಿ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಬಿಜೆಪಿ ಮಾಡಿ ತೋರಿಸಿದೆ ಎಂದರು.

ಗೋಷ್ಠಿಯಲ್ಲಿ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಬೀರ್ ದಾಸ್ ಉಪಸ್ಥಿತರಿದ್ದರು.