ವೀರಾಜಪೇಟೆ, ಏ. ೨೬: ನಗರದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಣಗೊಳಿಸಲು ಪುರಸಭೆಯು ವಿಧಿಸಿರುವ ಶುಲ್ಕ ಅವೈಜ್ಞಾನಿಕವಾಗಿದೆ, ಮೂಲಭೂತ ಸೌಕರ್ಯಗಳನ್ನು ನೀಡದೆ ತೆರಿಗೆ ಏರಿಕೆಗೊಳಿಸುವುದನ್ನು ನಾಗರಿಕ ಸಮಿತಿ ಖಂಡಿಸುತ್ತದೆ ಎಂದು ಇ.ರ.ದುರ್ಗಾಪ್ರಸಾದ್ ಹೇಳಿದರು.
ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ಗೋಣಿಕೊಪ್ಪಲು ರಸ್ತೆಯಲ್ಲಿರುವ ಕಛೇರಿಯಲ್ಲಿ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕ ಇ.ರ. ದುರ್ಗಾ ಪ್ರಸಾದ್, ನಗರದಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಕ್ರಮವನ್ನು ಪುರಸಭೆಯ ಆಡಳಿತರೂಢ ಸದಸ್ಯರು ಒಪ್ಪಿರುವುದು ಅವೈಜ್ಞಾನಿಕವಾಗಿದೆ. ವಿರೋಧ ಪಕ್ಷದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರೂ ಆದೇಶ ಜಾರಿಗೆ ಮಾಡಲಾಗಿದೆ. ವಾಹನ ಶುಲ್ಕ ವಿಧಿಸುವುದರಿಂದ ವಾಹನ ದಟ್ಟಣೆ ನಿಯಂತ್ರಣ ಮಾಡಬಹುದೆಂದು ಸಭೆ ಒಪ್ಪಿಗೆ ಸೂಚಿಸಿ ಶುಲ್ಕ ವಿಧಿಸುವ ಕ್ರಮ ಜಾರಿಗೊಳಿಸಿದೆ. ಆದರೆ ನಗರದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಅವ್ಯವಸ್ಥೆಯಿಂದ ಕೂಡಿದೆ.
ಪಾದಚಾರಿಗಳಿಗೆ ಸಂಚಾರ ಮಾಡಲು ಯೋಗ್ಯವಾದ ಪಾದಚಾರಿ ರಸ್ತೆಗಳಿಲ್ಲ, ಒಳಚರಂಡಿ ವ್ಯವಸ್ಥೆಯು ಕ್ರಮಬದ್ದವಾಗಿ ನಿರ್ವಹಣೆಯಿಲ್ಲ, ವಾಹನ ಮಾಲೀಕರು ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸಿ ಇತರೆಡೆಗಳಿಗೆ ತೆರಳುತ್ತಾರೆ. ನೂತನವಾಗಿ ಕಟ್ಟಡ ನಿರ್ಮಾಣ ಮಾಡುವವರು ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಬೇಕೆಂಬ ಕಾನೂನಿದ್ದರು ಸೂಕ್ತ ಸೌಕರ್ಯಯಿಲ್ಲದೆ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆಗೊಳಿಸಲಾಗುತ್ತಿದೆ. ಪರವಾನಿಗೆಯಿಲ್ಲದೆ ಕಟ್ಟಡ ನಿರ್ಮಾಣ ಮಾಡಿರುವುದು ಪುರಸಭೆಗೆ ತಿಳಿದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿರುವುದಿಲ್ಲಾ. ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ರಸ್ತೆ ಸಂಚಾರವು ದುಸ್ತರವಾಗಿದೆ. ಸಮಿತಿ ಹಲವು ಭಾರಿ ವಾಹನ ದಟ್ಟಣೆಯನ್ನು ನಿಯಂತ್ರಣ ಮಾಡಲು ಕೆಲವು ಸಲಹೆಗಳನ್ನು ನೀಡಿತ್ತು.
ಪುರಸಭೆ ಅಧ್ಯಕ್ಷರು ಸರ್ವಾಧಿಕಾರದ ಧೋರಣೆಯಿಂದ ಆದೇಶವನ್ನು ಮಾಡಿದ್ದಾರೆ. ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು, ಭಾರಿ ವಾಹನ, ದ್ವಿಚಕ್ರ ವಾಹನಗಳಿಗೆ ನಿಲುಗಡೆಗಾಗಿ ಸೂಕ್ತ ಅವಕಾಶ ಕಲ್ಪಿಸಬೇಕು. ಮೂಲ ಸೌಕರ್ಯ ಒದಗಿಸಲು ಹಿಂದೇಟು ಹಾಕಲಾಗುತ್ತಿದೆ. ಸಮಸ್ಯೆಗಳು ಬೆಟ್ಟದಷ್ಟಿದ್ದರೂ ಪರಿಹಾರ ಕಂಡುಕೊಳ್ಳಲು ವಿಫಲರಾಗಿದ್ದಾರೆ. ವಾಹನ ದಟ್ಟಣೆಯ ಸಮಸ್ಯೆ ಬಗೆಹರಿಸುವ ಬದಲು ವಾಹನಗಳ ಮೇಲಿನ ನಿಲುಗಡೆ ಶುಲ್ಕ ಹೆಚ್ಚಿಸಿರುವುದು ಮೂರ್ಖತನವಾಗಿದೆ ಎಂದು ಆರೋಪಿಸಿದ ದುರ್ಗಾಪ್ರಸಾದ್ ಅವರು ವಾಹನ ಶುಲ್ಕ ಏರಿಕೆಯನ್ನು ವಿರೋಧಿಸುತ್ತದೆ ಅಲ್ಲದೆ ನಾಗರಿಕ ಸಮಿತಿ ನೀಡಿರುವ ಸಲಹೆಗಳನ್ನು ಅನುಷ್ಠಾನಕ್ಕೆ ತರುವುವಂತೆ ಒತ್ತಾಯ ಮಾಡುತಿದ್ದೇವೆ ಎಂದು ಹೇಳಿದರು.
ಸಮಿತಿಯ ಸಹ ಸಂಚಾಲಕ ಬಿ.ಇ. ಸೋಮಲೋಕನಾಥ್ ಮಾತನಾಡಿ, ಕಾರ್ ಪಾರ್ಕಿಂಗ್ಗೆ ಎಂದು ನಕ್ಷೆಯಲ್ಲಿದ್ದರೂ ಆ ಸ್ಥಳವನ್ನು ಬಾಡಿಗೆ ನೀಡುತ್ತಾರೆ. ಸ್ಥಳಕ್ಕೆ ತೆರಿಗೆಯಿಲ್ಲ. ಕಟ್ಟಡ ನಿರ್ಮಾಣ ಮಾಡುವ ವೇಳೆಯಲ್ಲಿ ಕೆಳ ಅಂತಸ್ತು ಮತ್ತು ಮೊದಲ ಮಹಡಿ ಎಂದು ಪರವಾನಿಗೆ ಪಡೆದುಕೊಂಡು ಮೂರು ಅಂತಸ್ತು ಕಟ್ಟಡದ ನಿರ್ಮಾಣವಾಗುತ್ತದೆ. ನಕ್ಷೆಯಲ್ಲಿ ತೋರಿಸಿದ ಎರಡು ಅಂತಸ್ತು ಮಹಡಿಗಳಿಗೆ ತೆರಿಗೆ ಇಲ್ಲದೆ ವಂಚನೆಯಾಗುತ್ತಿದೆ. ಇದಕ್ಕೆ ಕಾರಣ ಪುರಸಭೆಯ ಚುನಾಯಿತ ಪ್ರತಿನಿಧಿಗಳು ಮಧ್ಯವರ್ತಿಗಳಂತೆ ವರ್ತನೆ ಮಾಡುವುದಾಗಿದೆ. ಪಕ್ಷಬೇಧÀ ಮರೆತು ತೆರಿಗೆ ವಂಚನೆಯಲ್ಲಿ ಚುನಾಯಿತ ಪ್ರತಿನಿಧಿಗಳು ಭಾಗಿಗಳಾಗಿದ್ದಾರೆ ಎಂದು ಆರೋಪಿಸಿದರು.
ಪುರಸಭೆಯ ಪೌರ ಸಿಬ್ಬಂದಿಗಳಿಗೆ ಮೂರು ತಿಂಗಳುಗಳಿAದ ವೇತನ ನೀಡಿರುವುದಿಲ್ಲ. ಸರ್ಕಾರದ ಅನುದಾನಗಳ ಇಚ್ಚಾನುಸಾರ ಬಳಕೆಯಾಗುತ್ತಿರುವುದು, ಪುರಸಭೆಗೆ ಬರಬೇಕಿದ್ದ ಕಾನೂನುಬದ್ಧ ತೆರಿಗೆ ಪಡೆಯಲು ವಿಫಲರಾಗಿರುವುದು, ಪಾದಚಾರಿ ರಸ್ತೆಯ ಮೇಲೆ ಅಂಗಡಿ ನಿರ್ಮಾಣ ಮಾಡಿರುವುದನ್ನು ತೆರುವು ಮಾಡಲು ಮುಂದಾಗುವುದಿಲ್ಲ. ನಾಗರಿಕ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿದರು ಹಿಂಬರಹ ಪತ್ರ ನೀಡಿ ಕಳುಹಿಸುತ್ತಾರೆ. ಮನವಿಯನ್ನು ಪುರಸ್ಕರಿಸಲಾಗಿದೆ ಅಥಾವ ತಿರಸ್ಕಾರ ಮಾಡಲಾಗಿದೆ ಎಂದು ತಿಳಿಯುದಿಲ್ಲ. ಮನವಿ ಪತ್ರಕ್ಕೆ ಮಾನ್ಯತೆ ನೀಡದೆ, ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ಪುರಸಭೆಯ ನಿರ್ಲಕ್ಷö್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ನಾಗರಿಕ ಸಮಿತಿಯ ಸದಸ್ಯ ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡಿ. ನಗರದಲ್ಲಿ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರುತ್ತದೆ ಎಂದು ತಿಳಿದಿದ್ದರೂ ಯಾವುದೇ ಮುಂಜಾಗೃತ ಕ್ರಮಕ್ಕೆ ಮುಂದಾಗದಿರುವುದು ಶೋಚನೀಯ. ನಗರದ ನಾಗರಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಪುರಸಭೆ ವಿಫಲವಾಗಿದೆ. ಕೋಟಿ ಕೋಟಿ ಅನುದಾನಗಳು ಬಂದರೂ ಮುಂದಾಲೋಚನೆಯಿಲ್ಲದೆ ಕ್ರೀಯಾಯೋಜನೆ ತಯಾರಿಸುವಲ್ಲಿ ವಿಫಲತೆಯಾಗಿದೆ. ಸಮಸ್ಯೆಗಳಿದ್ದರೂ ಈ ಹಿಂದೆ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಇಲ್ಲದೆ ಚುನಾಯಿತ ಪ್ರತಿನಿಧಿಯಿಂದ ಸಭೆಯನ್ನು ನಡೆಸಲಾಗಿದೆ. ಪುರಸಭೆ ಆಡಳಿತ ಮಂಡಳಿಯನ್ನು ವಿಸರ್ಜನೆ ಮಾಡಬೇಕು ಎಂದು ನಾಗರಿಕ ಸಮಿತಿ ಒತ್ತಾಯ ಮಾಡುತ್ತಿದೆ ಎಂದು ಹೇಳಿದರು. ಸಮಿತಿಯ ಸದಸ್ಯರಾದ ಎಲ್.ಜಿ. ಆಶೋಕ್, ಅಬ್ದುಲ್ ಶರೀಫ್ ಎನ್.ಕೆ. ಉಪಸ್ಥಿತರಿದ್ದರು.