ಕಣಿವೆ, ಏ. ೨೬ : ನಾನು ಹೊರ ಜಿಲ್ಲೆಯಿಂದ ಬಂದವನಲ್ಲ. ನಾನು ಸೋಮವಾರಪೇಟೆ ಸಾಕಮ್ಮನ ಕುಟುಂಬದ ಕುಡಿ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಗೆ ನಮಗೊಂದು ಅವಕಾಶ ಕೊಡಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರಗೌಡ ಮಂಗಳವಾರ ರಾತ್ರಿ ಕೂಡಿಗೆಯಲ್ಲಿ ಮನವಿ ಮಾಡಿದ ಪರಿಯಿದು.
ಕಳೆದ ೨೫ ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರು ಅಧಿಕಾರ ನಡೆಸಿರುವುದು ಸಾಕು. ಯುವ ಶಕ್ತಿಯನ್ನು ಚುನಾಯಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಎಐಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಕುಶಾಲನಗರ ತಾಲೂಕಿನ ಅಭಿವೃದ್ಧಿಯ ವಿರೋಧಿ ಅಪ್ಪಚ್ಚು ರಂಜನ್ ಅವರನ್ನು ಕ್ಷೇತ್ರದ ಜನ ಈ ಬಾರಿ ಸೋಲಿಸಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಖಚಿತ ಎಂದು ಭವಿಷ್ಯ ನುಡಿದರು.
ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಕಾಲದ ಅಭಿವೃದ್ಧಿ ಹೊರತುಪಡಿಸಿ ಈಗಿನ ಶಾಸಕ ಅಪ್ಪಚ್ಚು ರಂಜನ್ ಅವಧಿಯಲ್ಲಿ ಯಾವ ಅಭಿವೃದ್ಧಿಯೂ ಆಗಲಿಲ್ಲ. ೨೦ ವರ್ಷಗಳ ಸತತ ಹೋರಾಟದ ಫಲವಾಗಿ ಕುಶಾಲನಗರ ತಾಲೂಕನ್ನು ವಿ.ಪಿ. ಶಶಿಧರ್ ನೇತೃತ್ವದಲ್ಲಿ ಪಡೆದುಕೊಳ್ಳಲಾಯಿತು.
ಕುಶಾಲನಗರದ ಯುಜಿಡಿ ಕಾಮಗಾರಿ, ಕುಶಾಲನಗರ ತಾಲೂಕಿನ ಹನ್ನೆರಡು ಗ್ರಾಮಗಳಿಗೆ ಕುಡಿವ ಕಾವೇರಿ ನೀರಿನ ಯೋಜನೆ, ಸಂಚಾರಿ ಠಾಣೆ, ಖಾಸಗಿ ಬಸ್ ನಿಲ್ದಾಣ, ನ್ಯಾಯಾಲಯ ಸಂಕೀರ್ಣಕ್ಕೆ ಅನುದಾನ ಹೀಗೆ ವಕೀಲ ನಾಗೇಂದ್ರಬಾಬು, ದಿ. ಎಸ್.ಎನ್. ನರಸಿಂಹ ಮೂರ್ತಿ ಒಡಗೂಡಿ ಹತ್ತಾರು ಬಾರಿ ವಿಧಾನ ಸೌಧ ಅಲೆದು ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ತಂದ ನಮಗೆ ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಕ್ಷೇತ್ರದ ಮತ್ತಷ್ಟು ಅಭಿವೃದ್ದಿಗೆ ನಮ್ಮೊಂದಿಗೆ ಕೈಜೋಡಿಸಿ ಎಂದು ಚಂದ್ರಕಲಾ ಮನವಿ ಮಾಡಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಪರಿಕಲ್ಪನೆ ಹಾಗೂ ಚಿಂತನೆಯೇ ಇಲ್ಲದ ವ್ಯಕ್ತಿಯ ಕಪಿಮುಷ್ಠಿಯಲ್ಲಿ ಕ್ಷೇತ್ರ ಕಳೆದ ೨೫ ವರ್ಷಗಳ ಅವಧಿ ಸಿಲುಕಿದ್ದು ಸಾಕು. ಇನ್ನು ಯುವ ಶಕ್ತಿಗೆ ಕೆಲಸ ಬೇಕು ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಮಂಜುನಾಥ ಗುಂಡೂರಾವ್, ಕೂಡಿಗೆಯ ಟಿ.ಪಿ. ಹಮೀದ್ ಸೇರಿದಂತೆ ಹಲವರು ಇದ್ದರು.