ನನ್ನನ್ನು ದಕ್ಷಿಣ ಭಾರತದ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್...ಎAದೆಲ್ಲಾ ಕರೆಯುವರು. ಪ್ರಕೃತಿಯ ಮಡಿಲೆಂದೇ ಖ್ಯಾತಿಹೊಂದಿರುವ ನನ್ನ ಸೌಂದರ್ಯವನ್ನು ಆನಂದಿಸಲು ದೇಶ-ವಿದೇಶಗಳಿಂದ ಜನರು ಬರುತ್ತಿದ್ದಾರೆ. ಈ ಜನಸಾಗರಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಆಡಳಿತದವರು ಪಣತೊಡುತ್ತಿದ್ದಾರೆ. ಬರಿಯ ಮೂಲಭೂತ ಸೌಕರ್ಯವಲ್ಲದೆ, ಮೋಜು-ಮಸ್ತಿ ಮಾಡಲೂ ಸಹ ನನ್ನನ್ನು ಅಭಿವೃದ್ಧಿಪಡಿಸಿದ್ದಾರೆ.
ಜಿಪ್ ಲೈನ್, ಹ್ಯಾಂಗಿAಗ್ ಬ್ರಿಡ್ಜ್, ರಾಕೆಟ್ ಲಾಂಚರ್, ಸನ್ಸೆಟ್ ಪಾಯಿಂಟ್...ನನ್ನ ಅನೇಕ ಪ್ರಕೃತಿ ರಮಣೀಯ ತಾಣಗಳು ಬಹಳಷ್ಟು ಅಭಿವೃದ್ಧಿ ಕಂಡಿವೆ. ಜನರು ನನ್ನಲ್ಲಿಗೆ ಬಂದು ಮೋಜು-ಮಸ್ತಿ, ವಿರಾಮ ಹಾಗೂ ನೆಮ್ಮದಿಯನ್ನು ಪಡೆದು ಆನಂದಿಸಿ ಹಿಂದಿರುಗುತ್ತಾರೆ. ಆದರೆ ನನ್ನ ಸೌಂದರ್ಯ ಕುಗ್ಗುತ್ತಿದೆ...
ಲಕ್ಷಾಂತರ ಜನರು ನನ್ನಲ್ಲಿಗೆ ಬರುವವರು ನನನ್ನು ಗೌರವಿಸುತ್ತಿಲ್ಲ. ನನ್ನ ಪ್ರಕೃತಿ ರಮಣೀಯ ತಾಣಗಳು ಈಗ ಪ್ಲಾಸ್ಟಿಕ್, ಬಾಟಲಿ ಹಾಗೂ ಇನ್ನಿತರ ಕಸಗಳಿಂದ ತುಂಬಿತುಳುಕುತ್ತಿವೆ. ನನ್ನ ಪ್ರತಿ ಊರಿನಲ್ಲೂ ರಮಣೀಯ ತಾಣಗಳಿವೆಯಾದರೂ, ಯಾವದೇ ಒಂದು ಊರಿನಲ್ಲಿ ಸಾರ್ವಜನಿಕ ಕಸದ ಬುಟ್ಟಿಯಿಲ್ಲ. ಬಸ್ಸುಗಳಲ್ಲಿ, ಟೆಂಪೋ ಟ್ರಾವಲ್ಗಳಲ್ಲಿ ಜನಸಾಗರ ನನ್ನಲ್ಲಿಗೆ ಬರುತ್ತಾರೆ...ಬಂದೊಡನೆಯೇ ಅವರವರ ಗಾಡಿಗಳಲ್ಲಿನ ಕಸಗಳನ್ನು ನನ್ನ ಮಡಿಲಿಗೆ ಸುರಿಯುತ್ತಿದ್ದಾರೆ. ಹೊರಗಿನವರಲ್ಲದೆ, ನನ್ನವರೇ ಆದ ಅನೇಕರು ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ತಂದು ನನ್ನ ಮಡಿಲಿಗೆ ಸುರಿಯುತ್ತಿದ್ದಾರೆ.
ಸ್ವಲ್ಪ ದಿನ ನನ್ನಲ್ಲಿರುವ ಮಂಜಿನ ನಗರಿಯಲ್ಲಿ ಅನಧಿಕೃತ ಕಸ ವಿಲೇವಾರಿಯನ್ನು ತಡೆಗಟ್ಟಲು ಕ್ಯಾಮರಾಗಳನ್ನು ಅಳವಡಿಸಿ ದಂಡ ವಿಧಿಸಿದರಾದರೂ, ಮುಂದಿನ ಚುನಾವಣೆಯಲ್ಲಿ ದಂಡ ವಿಧಿಸಲ್ಪಟ್ಟ ನಗರವಾಸಿಗಳ ಓಟ್ ಕಳೆದುಕೊಳ್ಳುವ ಭಯದಿಂದ ಯೋಜನೆಯನ್ನು ಕೈಬಿಟ್ಟರು. ಈಗ ನೀವು ಎಲ್ಲೇ ಹೋಗಿ ನೋಡಿದರೂ ನಾನು ಕಸಮಯವಾಗಿದ್ದೇನೆ. ೨೦೧೮ನಲ್ಲಿ ನಾನು ಎಲ್ಲರಿಗೂ ಪ್ರಕೃತಿಯ ರೌದ್ರಾವತಾರ ತೋರಿಸಿದ್ದೇನೆ. ಆದರೆ ಇದೆಲ್ಲಾ ಮರೆತಿರುವ ಹಾಗಿದೆ. ಮಳೆಗಾಲದಲ್ಲಿ ಅತಿಯಾದ ಮಳೆ, ಬೇಸಿಗೆ ಕಾಲದಲ್ಲಿ ಮೈಸುಡುವಂತಹಾ ಬಿಸಿಲು. ನಾನು ನಿಧಾನವಾಗಿ ಬದಲಾಗುತ್ತಿದ್ದೇನೆ.
ನನ್ನಲ್ಲಿನ ಹಸಿರು ಮಾಯವಾಗುತ್ತಿದೆ, ಇದರ ಬದಲಿಗೆ ಪ್ಲಾಸ್ಟಿಕ್ ಅರಣ್ಯ ಹಬ್ಬುತ್ತಿದೆ. ಇನ್ನು, ರಜಾದಿನಗಳಲ್ಲಿ ಮನೆಯಿಂದ ಹೊರಬಂದು ನನ್ನ ಪ್ರಕೃತಿ ರಮಣೀಯ ತಾಣಗಳಿಗೆ ಬಂದು ಬಾಟಲಿಗಳಲ್ಲಿ ಮದ್ಯ ಸೇವಿಸುತ್ತಾರೆ. ಇನ್ನೂ ಯಾವದೇ ಸಾರ್ವಜನಿಕ ಕಸಬುಟ್ಟಿಗಳು ಇಲ್ಲದಿರುವ ಕಾರಣಕ್ಕೂ, ತಮ್ಮ ತಮ್ಮ ಮನೆಗಳಿಗೆ ಮದ್ಯದ ಬಾಟಲಿಗಳನ್ನು ವಾಪಸ್ಸು ತೆಗೆದುಕೊಂಡು ಹೋಗಲಾರದ ಪರಿಸ್ಥಿತಿ ಉದ್ಬವಿಸಿದಾಗ ನನ್ನ ಮಡಿಲಲ್ಲೇ ಬಾಟಲಿಗಳನ್ನು ಇರಿಸಿ ಹಿಂದಿರುಗುತ್ತಾರೆ. ಪುಟಾಣಿಗಳ ಡೈಪರ್, ಸ್ಯಾನಿಟರಿ ಪ್ಯಾಡ್ ಹಾಗೂ ಇನ್ನಿತರ ಕಸಗಳನ್ನು ನನ್ನಲ್ಲಿಗೆ ಹೊರಗಿನಿಂದ ಬಂದವರು ವಾಪಸ್ಸು ತೆಗೆದುಕೊಂಡು ಹೋಗಲು ಹಿಂಜರಿವರು. ಅನೇಕರು ಸಾರ್ವಜನಿಕ ಕಸದ ಬುಟ್ಟಿ ಹುಡುಕಿಕೊಂಡು ಹೋಗುವವರೂ ಇದ್ದಾರೆ... ಆದರೆ ಎಲ್ಲಿಯೂ ಸಿಗದಿದ್ದಾಗ ನನ್ನ ಕಾಡಿನ ಪ್ರದೇಶಗಳಲ್ಲಿ ಎಸೆದು ಹಿಂದಿರುಗುತ್ತಾರೆ.
ನನ್ನನ್ನು ಬಳಸಿಕೊಂಡು, ನನ್ನ ಅಭಿವೃದ್ಧಿಗೋಸ್ಕರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿಸುತ್ತಾರೆ. ಆದರೆ ನನ್ನನ್ನು ರಕ್ಷಿಸುವಲ್ಲಿ ಯಾರೂ ಪಣತೊಡುತ್ತಿಲ್ಲ. ನನ್ನ ಪ್ರವಾಸಿ ತಾಣ, ಶಾಲೆ-ಕಾಲೇಜಿನ ಜಾಗಗಳಲ್ಲಿ ಕಸದ ಬುಟ್ಟಿಗಳನ್ನು ಇಡಿ ಎಂದು ಎಷ್ಟೇ ಬೇಡಿಕೊಂಡರೂ ಯಾವದೋ ಕೈಗೆ ದೊರಕದ ಕೋರ್ಟ್ನ ಆರ್ಡರ್ ಹೇಳಿ ನನ್ನನ್ನು ಮತ್ತಷ್ಟು ಕುಗ್ಗಿಸುತ್ತಿದ್ದಾರೆ. ನನ್ನಲ್ಲಿ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳೂ ಕೂಡ ನನ್ನನ್ನು ಚಿಪ್ಸ್-ಬಿಸ್ಕೆಟ್ ಪ್ಯಾಕೆಟ್ಗಳಿಂದ ಹಾಳುಗೆಡವುತ್ತಿದ್ದಾರೆ. ಇನ್ನು ಎಷ್ಟುದಿನ ನನ್ನ ಪ್ರಕೃತಿಯ ವಿನಾಶವನ್ನು ಸಹಿಸಿಕೊಳ್ಳಬಹುದು ಎಂದು ನನಗೆ ತಿಳಿದಿಲ್ಲ. ಆದರೆ, ನನ್ನ ರಕ್ಷಣೆ ಈಗ ಆಡಳಿತದ ಹಾಗು ಇಲ್ಲಿನ ನನ್ನ ನಿವಾಸಿಗಳ ಹೊಣೆಯಾಗಿದೆ...ನನ್ನನ್ನು ರಕ್ಷಿಸಿ...
ಇಂತಿ ನಿಮ್ಮ,
ಪ್ರಕೃತಿಯ ಮಡಿಲಾದ ಕೊಡಗು