ಪೊನ್ನಂಪೇಟೆ, ಏ. ೨೨: ಮಡಿಕೇರಿ ತಾಲೂಕಿನ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಮುರಿ ಗ್ರಾಮದ ಕಡೆಲ್, ಬೊಳ್ತಂಡ, ಮಲೆಯರ ಪರಿಶಿಷ್ಟ ಪಂಗಡದವರ ಮನೆಗೆ ಹಾಗೂ ಬೊಳ್ತಂಡ ಕುಟುಂಬದ ಗುರುಮನೆ ಮತ್ತು ಸ್ಮಶಾನಕ್ಕೆ ತೆರಳುವ ಸುಮಾರು ೧ ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಳೆದ ೨೩ ವರ್ಷಗಳಿಂದ ರಸ್ತೆ ದುರಸ್ತಿಪಡಿಸದೇ ಕಡೆಗಣಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೂಡಲೇ ರಸ್ತೆ ಸರಿಮಾಡಿಕೊಡದೇ ಇದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ಗ್ರಾಮಸ್ಥರು ಸಂಬAಧಿಸಿದವರ ಕಾರ್ಯವೈಖರಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲಮುರಿ ಗ್ರಾಮದ ಕಡೆಲ್, ಬೊಳ್ತಂಡ, ಮಲೆಯರ ಪರಿಶಿಷ್ಟ ಕುಟುಂಬಗಳು ವಾಸಿಸುತ್ತಿರುವ ಇಲ್ಲಿ ಕಳೆದ ೨೩ ವರ್ಷಗಳಿಂದ ಒಂದು ಕಿ.ಮೀ.ನಷ್ಟು ರಸ್ತೆ ಕಾಮಗಾರಿಯನ್ನು ಕೈಗೊಳ್ಳದೇ ಇದ್ದು, ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳಲು ಹರಸಾಹಸ ಪಡಬೇಕಿದೆ. ರಸ್ತೆಯನ್ನು ಸರಿಪಡಿಸಿಕೊಡಿ ಎಂದು ಕಳೆದ ೨೩ ವರ್ಷಗಳಿಂದ ನೂರಾರು ಮನವಿ ಪತ್ರಗಳನ್ನು ಸಂಬAಧಿಸಿದವರಿಗೆ ಸಲ್ಲಿಸುತ್ತಾ ಬಂದಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ರಸ್ತೆ ದುರಸ್ತಿ ಪಡಿಸಿಕೊಡಿ ಎಂದು ಗ್ರಾಮ ಪಂಚಾಯ್ತಿಯ ವಾರ್ಡ್ ಸಭೆಗಳಲ್ಲಿ ಗ್ರಾಮಸ್ಥರು ಮಾಡಿಕೊಂಡ ಮನವಿಗೆ ಇದುವರೆಗೂ ಮಾನ್ಯತೆ ದೊರಕಿಲ್ಲ. ೨೦೧೬ ರಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ರಸ್ತೆ ಕಾಮಗಾರಿಗೆ ೬ ಲಕ್ಷದ ೬೬ ಸಾವಿರ ರೂಪಾಯಿಗಳ ಅನುದಾನ ಬಿಡುಗಡೆಯಾಗಿತ್ತಾದರೂ ಕೇವಲ ೧೦೦ ಮೀಟರ್ ದೂರದವರೆಗೆ ದಪ್ಪ ಜಲ್ಲಿಕಲ್ಲುಗಳನ್ನು ಹಾಕಿದ್ದು ಬಿಟ್ಟರೇ ಬೇರೇನೂ ಕೆಲಸವಾಗಿಲ್ಲ. ಹಾಗಾದರೆ ಬಂದ ಅನುದಾನ ಎಲ್ಲಿ ಹೋಯಿತು ಎಂಬ ಯಕ್ಷಪ್ರಶ್ನೆ ಸ್ಥಳೀಯರನ್ನು ಇಂದಿಗೂ ಕಾಡುತ್ತಿದೆ. ಮಳೆಗಾಲದಲ್ಲಿ ರಸ್ತೆ ಜಾರುಬಂಡಿಯAತಾಗುವ ಕಾರಣ ಪಿಕಪ್ ಜೀಪುಗಳು ಸೇರಿದಂತೆ ಯಾವುದೇ ವಾಹನಗಳು ಮಳೆಗಾಲದಲ್ಲಿ ಬಾಡಿಗೆಗೆ ದೊರಕುವುದಿಲ್ಲ. ತುರ್ತು ಸಂದರ್ಭ ಸೇರಿದಂತೆ ವ್ಯವಹಾರಕ್ಕೂ ರಸ್ತೆ ಸಮಸ್ಯೆ ಕಾಡುತ್ತಿದೆ. ಇದರಿಂದ ಮಳೆಗಾಲ ಬಂದರೆ ಸಾಕು ಇಲ್ಲಿನ ನಿವಾಸಿಗಳಿಗೆ ಆತಂಕ ಶುರುವಾಗುತ್ತದೆ. ಮಳೆಗಾಲದಲ್ಲಿ ಕೆಸರು ತುಂಬಿಕೊAಡು ಜಾರುಬಂಡಿಯAತಾಗುವ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೂ ಸಂಚರಿಸಲು ತೊಂದರೆಯಾಗುತ್ತಿದೆ. ಕಳೆದ ೨೩ ವರ್ಷಗಳಿಂದ ಕೇವಲ ಒಂದು ಕಿಲೋಮೀಟರ್ ರಸ್ತೆಯನ್ನು ದುರಸ್ತಿಪಡಿಸಿಕೊಡಿ ಎಂದು ಕೇಳುತ್ತಿರುವ ಸ್ಥಳೀಯ ನಿವಾಸಿಗಳ ಕೂಗು ಸಂಬAಧಿಸಿದವರಿಗೆ ಕೇಳದೆ ಇರುವ ಕಾರಣ ಆಕ್ರೋಶಗೊಂಡ ಸ್ಥಳೀಯರು ಚುನಾವಣೆ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಬೊಳ್ತಂಡ ನಾಣಯ್ಯ, ರೇವತಿ, ಪಳಂಗಪ್ಪ, ಗಿಲನ್, ವರ್ಷ ಪೊನ್ನಮ್ಮ, ಮಾಚಯ್ಯ, ಭವಾನಿ, ಗಂಗಮ್ಮ, ಡಾಲಿ, ಈರಪ್ಪ, ಗೀತಾ, ನಿರೀತ, ಉತ್ತಪ್ಪ ಮತ್ತಿತರರು ಹಾಜರಿದ್ದರು.
- ಚನ್ನನಾಯಕ