ಕಣಿವೆ, ಏ. ೨೩: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆ ಶಿಬಿರದಲ್ಲಿ ಇರುವ ಸಾಕಾನೆಗಳಿಗೆ ಅಲ್ಲಿನ ಅರಣ್ಯದಲ್ಲಿ ಇಷ್ಟವಾದ ಹುಲ್ಲು, ಸೊಪ್ಪು, ಗಿಡ ಗಂಟಿಗಳಿಲ್ಲ. ಮಳೆ ಸುರಿಯದ ಕಾರಣ ಇದ್ದ ಹುಲ್ಲು ಕೂಡ ಒಣಗಿ ಹೋಗಿದೆ. ಹಾಗಾಗಿ ಸರ್ಕಾರ ಪೂರೈಸುವ ಆಹಾರ ಧಾನ್ಯಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬAತಾಗಿದೆ.
ಹಸಿವು ತಾಳದೇ ಹಾಹಾಕಾರ ಪಡುತ್ತಿರುವ ಸಾಕಾನೆಗಳಿಗೆ ಖಾಸಗಿ ವ್ಯಕ್ತಿಗಳಿಂದ ಬೈನೆ ಮರದ ಸೊಪ್ಪು, ಹಲಸು ಮೊದಲಾದ ತಿನಿಸಿನ ಸೊಪ್ಪುಗಳನ್ನು ಬಾಡಿಗೆ ವಾಹನಗಳಲ್ಲಿ ತುಂಬಿಸಿ ದುಬಾರೆಯ ನದಿ ದಂಡೆಗೆ ತರಲಾಗುತ್ತಿದೆ. ಹೀಗೆ ತಂದ ಸೊಪ್ಪುಗಳ ರಾಶಿಯನ್ನು ಸಾಕಾನೆಯ ಮೂಲಕ ನದಿ ದಾಟಿ ದುಬಾರೆಯ ಸಾಕಾನೆಯ ಶಿಬಿರದ ಒಳಗೆ ತರಲಾಗುತ್ತಿದೆ. ಹೀಗೆ ತರುವ ಸೊಪ್ಪುಗಳು ಸಾಕಾನೆಗಳ ಹೊಟ್ಟೆಗೆ ಯಾವ ಮೂಲೆಗೂ ಸಾಕಾಗುತ್ತಿಲ್ಲ.
ಪ್ರಕೃತಿಯ ಮುನಿಸಿನಿಂದಾಗಿ ಸಕಾಲಿಕವಾಗಿ ಮಳೆಯಾಗದ ಕಾರಣ ಈ ಬಾರಿ ಇಂತಹ ದುರವಸ್ಥೆ ಉಂಟಾಗಿರುವುದರಿAದ ಸರ್ಕಾರ ಅಥವಾ ಅರಣ್ಯ ಇಲಾಖೆ ವಿಶೇಷವಾದ ಕಾಳಜಿ ವಹಿಸುವ ಮೂಲಕ ಸಾಕಾನೆಗಳಿಗೆ ಆಹಾರ ಮತ್ತು ನೀರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲ ಉಂಟಾಗದAತೆ ಎಚ್ಚರ ವಹಿಸಿ ಜಾಗ್ರತೆ ವಹಿಸಬೇಕಿದೆ ಎಂಬುದು ಪ್ರಾಣಿ ಪ್ರಿಯರ ಕೋರಿಕೆಯಾಗಿದೆ.
ಅಲ್ಲದೇ ವರುಣ ಕೃಪೆ ತೋರಿ ಮಳೆ ಸುರಿದು ಅರಣ್ಯದಲ್ಲಿ ಆನೆಗಳಿಗೆ ಬೇಕಾದ ಆಹಾರದ ಗಿಡ ಮರಗಳ ಸೊಪ್ಪುಗಳು ಸಿಗುವ ತನಕ ಖಾಸಗಿ ತೋಟಗಳ ಮಾಲೀಕರು ಹಾಗೂ ಇತರೇ ಸಹೃದಯಿಗಳು ತಮ್ಮಲ್ಲಿ ಸಿಗಬಹುದಾದ ಆಲ, ಅರಳಿ, ಮಾವು, ಹಲಸು, ಬೈನೆ ಮೊದಲಾದ ಸೊಪ್ಪುಗಳನ್ನು ಸಾಕಾನೆ ಶಿಬಿರಕ್ಕೆ ಪೂರೈಸುವ ಮೂಲಕ ಮಾನವೀಯತೆ ತೋರಬೇಕಿದೆ.
ಏಪ್ರಿಲ್ ಮಾಸಂತ್ಯದೊಳಗೆ ಮಳೆ ಸುರಿದು ನದಿಯಲ್ಲಿ ನೀರು ಹರಿಯದಿದ್ದಲ್ಲಿ ಈಗ ದುಬಾರೆಯ ಕಾವೇರಿ ನದಿಯಲ್ಲಿ ಇರುವ ನೀರಿನ ಪ್ರಮಾಣ ಕ್ಷೀಣವಾಗುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಎಲ್ಲರ ಕೋರಿಕೆಯೊಂದೇ ಅದು ವರುಣನ ಕೃಪೆ.
(ಕೆ.ಎಸ್. ಮೂರ್ತಿ)