ಸಿದ್ದಾಪುರ, ಏ. ೨೩: ಅಮ್ಮತ್ತಿ-ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಪಾಷಾಣಮೂರ್ತಿ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ ದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ದೇವಾಲಯದ ಪ್ರಮುಖರಾದ ಕುಟ್ಟಂಡ ಸರಸ್ವತಿ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಅಮ್ಮತ್ತಿಯ ಗುರೂಜಿ ಗುರುರಾಜ್ ಭಟ್ ನೇತೃತ್ವದಲ್ಲಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಿಗ್ಗೆ ಕ್ಷೇತ್ರದಲ್ಲಿರುವ ದೈವ ದೇವರುಗಳಿಗೆ ವಾದ್ಯಗೋಷ್ಠಿಯೊಂದಿಗೆ ಅಭಿಷೇಕ ಹಾಗೂ ಅಲಂಕಾರ ಪೂಜೆ, ನಂತರ ಗಣಪತಿ ಹೋಮ, ಮೃತ್ಯುಂಜಯ ಹೋಮ, ಚಂಡಿಕಾ ಹೋಮ ನಡೆಯಿತು. ಇದಾದ ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಸಂಜೆ ಆಶ್ಲೇಷ ಬಲಿ, ನಾಗಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಸಮೃದ್ಧಿ ಎ.ವಿ. ಅವರಿಂದ ಭರತನಾಟ್ಯ ಹಾಗೂ ಗಾಯನ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮತ್ತಿಯ ಕಿರ್‌ಂದAಡ ಪಾಲಿ ಪಾರ್ವತಿ ವಹಿಸಿದ್ದರು. ದೇವಾಲಯದ ಪ್ರಮುಖರಾದ ಕುಟ್ಟಂಡ ಸರಸ್ವತಿ ಲೋಕೇಶ್ ಮುತ್ತಪ್ಪ, ಹರ್ಷಿತಾ ಹಾಗೂ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಉದ್ದಪಂಡ ಅಯ್ಯಪ್ಪ, ಖುಶಿ ಅಯ್ಯಪ್ಪ, ರಾಗಿಣಿ ಇನ್ನಿತರರು ಹಾಜರಿದ್ದರು.

ಈ ಸಂದರ್ಭ ಅಮ್ಮತ್ತಿಯ ಶಿಕ್ಷಕಿ ವಿಶಾಲಾಕ್ಷಿ ಅವರು ಧಾರ್ಮಿಕ ಪ್ರವಚನ ನೀಡಿದರು. ಗುರುರಾಜ್ ಭಟ್ ಸ್ವಾಗತಿಸಿ, ವಂದಿಸಿದರು. ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮಗಳಿಗೆ ಜಿಲ್ಲೆಯ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.