ಚೆಟ್ಟಳ್ಳಿ/ಚೆಂಬೆಬೆಳ್ಳೂರ್, ಏ. ೨೩: ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರಿನ ವಾರ್ಷಿಕ ಬೋಡ್ ನಮ್ಮೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ತಾಲಿಪಾಟ್, ಹುಲಿ ವೇಷಧಾರಿಗಳು, ಬಂಡ್‌ಕಳಿ, ಪಿಲ್ಲ್ ಭೂತ, ಹೆಣ್ಣಿನ ವೇಷಧಾರಿಗಳ ಆತ್ಯಾಕಷÀðಣೀಯ ಕುಣಿತ ವಿಶೇಷವಾಗಿತ್ತು.

ಹಬ್ಬದ ಅಂಗವಾಗಿ ಭದ್ರಕಾಳಿ ದೇವಾಲಯಕ್ಕೆ ತಳಿರು - ತೋರಣಗಳಿಂದ ಅಲಂಕರಿಸಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ತಾ.೨೧ರಂದು ಚೀರುಳಿ ಅಂಬಲದಲ್ಲಿ ಭದ್ರಕಾಳಿಯ ಒಂದು ಮುಡಿತೆರೆ ಕಟ್ಟಿ ಪೂಜಿಸಿ ದೇವರ ನೆಲೆಗೆ ಬಂದು ಕುಣಿಯಲಾಯಿತು. ತಾ. ೨೨ ರಂದು ಊರಿನ ಮೂರು ಕೇರಿಯಿಂದ ಬೆತ್ತದಿಂದ ಮಾಡಿ ಶೃಂಗರಿಸಿದ ಮೂರು ಕೃತಕ ಕುದುರೆಯೊಂದಿಗೆ ಊರಿನವರ ಸಮ್ಮುಖದಲ್ಲಿ ಅಂಬಲಕ್ಕೆ ಬಂದು ದೇವಾಲಯದಲ್ಲಿ ಸೇರುವ ಮೂಲಕ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಬೊಳಕಾಟ್, ತೆಂಗಿನಕಾಯಿ ಎಳೆಯುವ ಸ್ಪರ್ಧೆ, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ ಊರಿನವರು ಹರಕೆ ಹೊತ್ತವರು ಮೈ ಮೇಲೆ ಬಣ್ಣ ಬಳಿದುಕೊಂಡು ಹುಲಿ ವೇಷ ಸೇರಿದಂತೆ ವಿಧದ ವೇಷಕಟ್ಟಿ ಬೆಳಗ್ಗಿನವರೆಗೆ ಮನೆ ಮನೆಗೆ ತೆರಳಿದರು.

ತಾ.೨೩ರಂದು ಸಂಜೆ ವೇಷಧಾರಿಗಳು ಅಂಬಲದಲ್ಲಿ ಸೇರಿದರು. ಊರಿನವರು ಹಾಡಿನೊಂದಿಗೆ ಡೋಲನ್ನು ಕೊಟ್ಟುತ್ತಾ ದೋಳ್‌ಪಾಟ್‌ನೊಂದಿಗೆ ಭದ್ರಕಾಳಿ, ಚಾಮುಂಡಿ ಹಾಗೂ ಮಕ್ಕಾಟ್ ಅಯ್ಯಪ್ಪ ವೃತಧಾರಿಗಳು ದೇವರ ಆಯುಧವನ್ನು ಜಳಪಿಸುತ್ತಾ ಭದ್ರಕಾಳಿ ದೇವಾಲಯದೆಡೆಗೆ ನಡೆದರೆ, ಹಲವು ವೇಷಧಾರಿಗಳ ತಂಡ ಡೋಲಿಗೆÀ ಹೆಜ್ಜೆ ಹಾಕಿ ಕುಣಿಯತ್ತಾ ದೇವಾಲಯದೊಳಕ್ಕೆ ಪ್ರವೇಶಿಸಿ ದೇವರ ಗರ್ಭಗುಡಿಗೆ ಮೂರು ಪ್ರದಕ್ಷಿಣಿ ಬರಲಾಯಿತು.

ತಾ. ೨೪ರಂದು ಸಾಂಪ್ರದಾಯಿಕ ಚೂಳೆ, ಹೆಣ್ಣಿನ ವೇಷಧಾರಿ ಹಾಗೂ ಹೆಣ್ಣು ಮಕ್ಕಳು ಅಂಬಲದಲ್ಲಿ ಸೇರಿ ದೇವಾಲಯಕ್ಕೆ ಬರುವರು. ಎತ್ತು ಪೋರಾಟ, ತೆಂಗಿನಕಾಯಿ ಎಳೆಯುವರು. ತಾ. ೨೫ರಂದು ದೇವರ ಭಂಡಾರದ ಲೆಕ್ಕಾಚಾರ, ಸಭೆಯೊಂದಿಗೆ ಹಬ್ಬದ ಆಚರಣೆ ಕೊನೆಗೊಳ್ಳಲಿದೆ.

-ಪುತ್ತರಿರ ಕರುಣ್ ಕಾಳಯ್ಯ.