ಗೋಣಿಕೊಪ್ಪಲು, ಏ.೨೧ : ವಿದ್ಯುತ್ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆ ಬಾಳೆಲೆ ವ್ಯಾಪ್ತಿಯ ಸೆಸ್ಕ್ ಸಹಾಯಕ ಇಂಜಿನಿಯರ್ ರಂಗಸ್ವಾಮಿಯನ್ನು ಸೆಸ್ಕ್ ಹಿರಿಯ ಅಧಿಕಾರಿ ಸೋಮರಾಜ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಇಂಜಿನಿಯರ್ ರಂಗಸ್ವಾಮಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕೊಡಗು ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಗೋಣಿಕೊಪ್ಪ ಸೆಸ್ಕ್ ಕಚೇರಿಯ ಮುಂದೆ ಮುಂಜಾನೆಯಿAದಲೇ ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದರು.

ಗುತ್ತಿಗೆದಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸೆಸ್ಕ್ ಹಿರಿಯ ಅಧಿಕಾರಿಗಳಾದ ಅಧೀಕ್ಷಕ ಅಭಿಯಂತರರು ಸೋಮರಾಜ್, ಕಾರ್ಯ ನಿರ್ವಾಹಕ ಅಭಿಯಂತರೆ ಅನಿತಾಬಾಯಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನೀಲಶೆಟ್ಟಿ ಆಗಮಿಸಿದ್ದರು.

ಈ ವೇಳೆ ಬಾಳೆಲೆ ಸೆಸ್ಕ್ ಸಹಾಯಕ ಇಂಜಿನಿಯರ್ ರಂಗಸ್ವಾಮಿಯವರನ್ನು ಅಮಾನತು ಮಾಡುವಂತೆ ಗುತ್ತಿಗೆದಾರರ ಸಂಘದ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಆರೋಪ ಹೊತ್ತಿರುವ ಬಾಳೆಲೆ ಜೆಇ ರಂಗಸ್ವಾಮಿ ಅವರನ್ನು ಹಿರಿಯ ಅಧಿಕಾರಿಗಳು ಸಂಪರ್ಕ ಮಾಡಲು ಎಷ್ಟೇ ಪ್ರಯತ್ನ ನಡೆಸಿದರೂ ದೂರವಾಣಿ ಸಂಪರ್ಕಕ್ಕೂ ರಂಗಸ್ವಾಮಿ ಲಭ್ಯವಾಗಲಿಲ್ಲ. ಅಂತಿಮವಾಗಿ ಸಂಜೆಯ ವೇಳೆ ಕರ್ತವ್ಯದಲ್ಲಿ ನಿರ್ಲಕ್ಷö್ಯ ಹಾಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ರಂಗಸ್ವಾಮಿ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.

ಪ್ರತಿಭಟನೆ ವೇಳೆ ಕೊಡಗು ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ರಮೇಶ್, ಜಿಲ್ಲಾ ಅಧ್ಯಕ್ಷ ವಸಂತ್ ರೈ ಸೇರಿದಂತೆ ಪಿರಿಯಾಪಟ್ಟಣ ಹಾಗೂ ಮೈಸೂರು ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.