ಗೋಧ್ರಾ ರೈಲು ದಹನ ಪ್ರಕರಣ : ಅಪರಾಧಿಗಳಿಗೆ ಜಾಮೀನು
ನವದೆಹಲಿ, ಏ. ೨೧: ೨೦೦೨ರಲ್ಲಿ ಗುಜರಾತ್ನಲ್ಲಿ ನಡೆದ ಗೋಧ್ರಾ ರೈಲು ದಹನ ಪ್ರಕರಣದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೆ, ಪ್ರಕರಣದಲ್ಲಿನ ಅವರ ಗಂಭೀರ ಪಾತ್ರವನ್ನು ಗಮನಿಸಿ ಇತರ ನಾಲ್ವರಿಗೆ ಜಾಮೀನು ನಿರಾಕರಿಸಿದೆ. ೨೦೦೨ರ ಫೆಬ್ರವರಿ ೨೭ ರಂದು ಗುಜರಾತ್ನ ಗೋಧ್ರಾದಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ ೫೯ ಮಂದಿ ಮೃತಪಟ್ಟಿದ್ದರು. ಬಳಿಕ ರಾಜ್ಯದಾದ್ಯಂತ ಗಲಭೆ ನಡೆದಿತ್ತು. ಅಪರಾಧಿಗಳು ಈಗಾಗಲೇ ಸುಮಾರು ೧೭ ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿಗಳ ವಿಚಾರಣೆಯನ್ನು ತೀರ್ಪು ಪ್ರಕಟಿಸಿದೆ. ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನಾಲ್ವರು ಆರೋಪಿಗಳಿಗೆ ಜಾಮೀನು ನೀಡುವುದನ್ನು ವಿರೋಧಿಸಿದರು. ಅವರಲ್ಲಿ ಒಬ್ಬರಿಂದ ಕಬ್ಬಿಣದ ಪೈಪ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇನ್ನೊಬ್ಬ ಆರೋಪಿಯಿಂದ ಆಯುಧವನ್ನು (ಕುಡಗೋಲು) ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಕೋಚ್ಗೆ ಬೆಂಕಿ ಹಚ್ಚಲು ಬಳಸಿದ ಪೆಟ್ರೋಲ್ ಅನ್ನು ಖರೀದಿಸಿ, ಸಂಗ್ರಹಿಸಿಟ್ಟುಕೊAಡಿದ್ದ ಮತ್ತು ಕೊನೆಯ ಆರೋಪಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡಿದ್ದಾರೆ ಎಂದು ದೂರಿದರು.
ಈಶ್ವರಪ್ಪಗೆ ಕರೆ ಮಾಡಿದ ಪ್ರಧಾನಿ
ಶಿವಮೊಗ್ಗ, ಏ. ೨೧: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಜಾನೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳಲು ಪಕ್ಷ ಸೂಚಿಸುತ್ತಿದ್ದಂತೆ ಪಕ್ಷದ ಆದೇಶವನ್ನು ಈಶ್ವರಪ್ಪ ಪಾಲನೆ ಮಾಡಿದ್ದರು. ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್ಗೆ ಟಿಕೆಟ್ ಬಯಸಿದ್ದರು. ಆದರೆ ಪುತ್ರನಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಈಶ್ವರಪ್ಪ ಅಸಮಾಧಾನಗೊಳ್ಳಬಹುದು ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಈಶ್ವರಪ್ಪ ಇದು ಯಾವುದಕ್ಕು ತಲೆ ಕೆಡಿಸಿಕೊಳ್ಳದೇ ಪಕ್ಷ ನಿಷ್ಠೆ ಮೆರೆದಿದ್ದು, ಇದೇ ಕಾರಣಕ್ಕೆ ಸ್ವತಃ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಈಶ್ವರಪ್ಪ ಅವರ ಪಕ್ಷ ನಿಷ್ಠೆ ಮೆಚ್ಚಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದೂರವಾಣಿ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದು, ಈ ವೇಳೆ ಈಶ್ವರಪ್ಪ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಂದಿಗೆ ಈ ರೀತಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಸಂಘಟನೆ ಹಾಗೂ ನಿಮ್ಮೊಂದಿಗೆ ಸದಾ ನಾನು ಇರುತ್ತೇನೆ ಎಂದು ಈಶ್ವರಪ್ಪ ತಿಳಿಸಿದರು.
ಡಿ.ಕೆ.ಶಿ. ನಾಮಪತ್ರ ಅಂಗೀಕಾರ
ರಾಮನಗರ, ಏ. ೨೧: ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದ್ದು, ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ನಾಮಪತ್ರದಲ್ಲಿ ಯಾವುದೇ ಲೋಪದೋಷಗಳಿಲ್ಲ. ಎಲ್ಲವೂ ಕ್ರಮಬದ್ಧವಾಗಿದೆ. ಹೀಗಾಗಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ನಾಮಪತ್ರವನ್ನು ಕನಕಪುರ ಚುನಾವಣಾಧಿಕಾರಿ ಮಾನ್ಯ ಮಾಡಿದ್ದಾರೆ. ಆಸ್ತಿ ಹಾಗೂ ತೆರಿಗೆ ಲೆಕ್ಕಾಚಾರ ಸಮಸ್ಯೆಯಿಂದಾಗಿ ನಾಮಪತ್ರ ತಿರಸ್ಕೃತವಾಗುತ್ತದೆ ಎನ್ನುವ ಆತಂಕ ಡಿ.ಕೆ. ಶಿವಕುಮಾರ್ ಅವರಿಗೆ ಎದುರಾಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರಿಂದಲೂ ಕೊನೆಗಳಿಗೆಯಲ್ಲಿ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಂತೆ ಮಾಡಿದ್ದರು.
ಭಾರತೀಯರ ಸ್ಥಿತಿಗತಿ ಕುರಿತು ಪ್ರಧಾನಿ ನೇತೃತ್ವದಲ್ಲಿ ಸಭೆ
ನವದೆಹಲಿ, ಏ. ೨೧: ಸುಡಾನ್ನಲ್ಲಿರುವ ಭಾರತೀಯರ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ, ರಾಷ್ಟಿçÃಯ ಭದ್ರತಾ ಸಲಹೆಗಾರರು ಮತ್ತು ಸುಡಾನ್ನ ಭಾರತದ ರಾಯಭಾರಿ ಸಭೆಯಲ್ಲಿ ಉಪಸ್ಥಿತರಿದ್ದರು. ಸುಡಾನ್ ಮಿಲಿಟರಿ ಮತ್ತು ಅರೆಸೇನಾ ಪಡೆ ನಡುವಿನ ಘರ್ಷಣೆಯಿಂದಾಗಿ ಉಂಟಾದ ಹಿಂಸಾಚಾರದಲ್ಲಿ ಒಬ್ಬ ಭಾರತೀಯ ಪ್ರಜೆ ಸೇರಿದಂತೆ ೨೦೦ ಜನರು ಸಾವನ್ನಪ್ಪಿದ್ದು, ಪ್ರಧಾನಿ ಮೋದಿ ಸುಡಾನ್ನಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸಿದರು. ಸೂಡಾನ್ನಲ್ಲಿರುವ ಪರಿಸ್ಥಿತಿ ಕುರಿತು ವರದಿಯನ್ನು ಪಡೆದ ಪ್ರಧಾನಿ, ಪ್ರಸ್ತುತ ಅಲ್ಲಿ ಸಿಲುಕಿರುವ ೩,೦೦೦ ಭಾರತೀಯ ಪ್ರಜೆಗಳ ಸುರಕ್ಷತೆಗೆ ಕಡೆಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರಶಾಂತ್ ಮಾಡಾಳ್ಗೆ ಷರತ್ತುಬದ್ಧ ಜಾಮೀನು
ಬೆಂಗಳೂರು, ಏ. ೨೧: ಗುತ್ತಿಗೆದಾರರಿಂದ ೪೦ ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಇಲಾಖೆಗೆ ಸಿಕ್ಕಿಬಿದ್ದಿದ್ದ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬಿಜೆಪಿ ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ ಅವರನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಕಚೇರಿಯಲ್ಲಿ ತಂದೆಯ ಪರವಾಗಿ ೪೦ ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಮಾರ್ಚ್ ೨ ರಂದು ಬಂಧಿಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ವಿರೂಪಾಕ್ಷಪ್ಪ ಅವರಿಗೆ ಮಾರ್ಚ್ ೪ ರಂದು ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ನ್ಯಾಯಾಲಯ ಆವರಣದಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ
ನವದೆಹಲಿ, ಏ. ೨೧: ಶುಕ್ರವಾರ ಬೆಳಗ್ಗೆ ದಕ್ಷಿಣ ದೆಹಲಿಯ ಸಾಕೇತ್ ನ್ಯಾಯಾಲಯದ ಆವರಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಮಹಿಳೆ ಮೇಲೆ ದುಷ್ಕರ್ಮಿಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯೊಬ್ಬ ಗುಂಡು ಹಾರಿಸಿದಾಗ ಮಹಿಳೆ ತನ್ನ ವಕೀಲರೊಂದಿಗೆ ಇದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ದಾಳಿಕೋರರಾದ ರಾಹುಲ್ ತ್ಯಾಗಿ ಮತ್ತು ಜಗದೀಪ್ ಜಗ್ಗಾ ಎಂಬವರು ನ್ಯಾಯಾಲಯದ ಕೋಣೆಗೆ ಪ್ರವೇಶಿಸಲು ವಕೀಲರಂತೆ ಪೋಸ್ ನೀಡಿದ್ದರು ಮತ್ತು ಗ್ಯಾಂಗ್ಸ್ಟರ್ ಜಿತೇಂದರ್ ಮಾನ್ ಅಲಿಯಾಸ್ ಗೋಗಿ ಮೇಲೆ ಅನೇಕ ಗುಂಡುಗಳನ್ನು ಹಾರಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ದಾಳಿಕೋರರು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ರೋಹಿಣಿ ಅವರಿಗೆ ನ್ಯಾಯಾಲಯದಲ್ಲಿ ಇಬ್ಬರು ವಕೀಲರು ಮತ್ತು ಅವರ ಒಬ್ಬ ಕಕ್ಷಿದಾರನ ನಡುವೆ ಘರ್ಷಣೆ ನಡೆದಿತ್ತು.
ಉಗ್ರರಿಗಾಗಿ ಸೇನಾಪಡೆಗಳ ಕಾರ್ಯಾಚರಣೆ
ಪೂಂಚ್, ಏ. ೨೧: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಘಟನೆ ಬಳಿಕ ಅಡಗಿ ಕುಳಿತಿರುವ ಉಗ್ರರಿಗಾಗಿ ಸೇನಾಪಡೆಗಳು ಶುಕ್ರವಾರ ಭಾರೀ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ದಾಳಿ ನಡೆದ ಸ್ಥಳದ ಸುತ್ತಲೂ ಭದ್ರತಾ ಪಡೆಗಳು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಉಗ್ರರ ಪತ್ತೆಗೆ ಡ್ರೋನ್ಗಳು, ಸ್ನಿಫ್ಪರ್ ಡಾಗ್ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಗಡಿ ಜಿಲ್ಲೆಗಳಾದ ರಜೌರಿ ಹಾಗೂ ಪೂಂಚ್ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಕಣ್ಗಾವಲನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆ ಬಳಿಕ ಭಿಂಬರ್ ಗಲಿ-ಪೂಂಚ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಮೆಂಧರ್ ಮೂಲಕ ಪೂಂಚ್ಗೆ ಹೋಗಲು ಜನರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.