ಸೋಮವಾರಪೇಟೆ, ಏ. ೨೦: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀಸಲು ಅರಣ್ಯದಂಚಿನ ನೇರಳೆ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಮುಂಬರುವ ವಿಧಾನ ಸಭಾ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಗ್ರಾಮದ ಪ್ರವೇಶ ದ್ವಾರದಲ್ಲೇ ಚುನಾವಣೆ ಬಹಿಷ್ಕಾರದ ಫಲಕ ಅಳವಡಿಸಿರುವ ಗ್ರಾಮಸ್ಥರು, ಮತದಾನದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ನೇರಳೆ ಗ್ರಾಮದಲ್ಲಿ ೩೦ ಕುಟುಂಬಗಳು ವಾಸಿಸುತ್ತಿವೆ. ಕಳೆದ ೨೦ ವರ್ಷಗಳಿಂದ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಅನ್ಯಾಯ ಮಾಡಲಾಗಿದೆ. ಬಹುತೇಕ ಕುಟುಂಬಗಳು ಕೂಲಿ ಕೆಲಸ ಮಾಡಿ ಬದುಕುವಂತಹ ಪರಿಸ್ಥಿತಿ ಇದೆ. ಕೃಷಿ ಫಸಲು ಕಾಡಾನೆ ಪಾಲಾಗುತ್ತಿವೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಾಡಂಚಿನಲ್ಲಿ ಸೋಲಾರ್ ಬೇಲಿ ಅಳವಡಿಸಿದ್ದರೂ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಉಲ್ಲಾಸ ದೂರಿದ್ದು, ಗ್ರಾಮದ ರಸ್ತೆ ಹಾಳು ಬಿದ್ದಿವೆ. ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ದರೂ ಅನುದಾನ ಕಲ್ಪಿಸಿಲ್ಲ. ಈ ಹಿನ್ನೆಲೆ ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.