ಮಡಿಕೇರಿ, ಏ. ೨೦: ಕೊಡಗು ಜಿಲ್ಲೆಯಲ್ಲಿ ಇದೀಗ ತೀವ್ರತರವಾದ ಮಳೆ ಕೊರತೆ ಎದುರಾಗಿದ್ದು, ಜಿಲ್ಲೆಯನ್ನು ‘ಬರ ಪೀಡಿತ ಪ್ರದೇಶ’ ಎಂದು ಘೋಷಿಸಬೇಕೆಂದು ಕೊಡಗು ಸಂರಕ್ಷಣಾ ವೇದಿಕೆ ಪ್ರಮುಖರು ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೇದಿಕೆಯ ಪ್ರಮುಖರಾದ ಚೊಟ್ಟಕ್‌ಮಾಡ ರಾಜೀವ್ ಬೋಪಯ್ಯ, ಕೊಡಗು ಜಿಲ್ಲೆ ಮಳೆಯನ್ನು ಆಶ್ರಯಿಸಿದ ಕೃಷಿ ಪ್ರದೇಶವಾಗಿದ್ದು, ಇದೀಗ ಹವಾಮಾನ ವೈಪರೀತ್ಯದಿಂದ ಮಳೆಯ ತೀವ್ರ ಕೊರತೆ ಎದುರಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಿಲ್ಲದೇ ಕಾಫಿ ಗಿಡಗಳು ಸಂಪೂರ್ಣ ಒಣಗಿ ಹೋಗಿದ್ದು, ಮತ್ತೆ ಹೊಸ ಗಿಡಗಳನ್ನು ಬೆಳೆಸಿ ಫಸಲು ಪಡೆಯಲು ೨೦ ವರ್ಷಗಳ ಕಾಲ ಬೆಳೆಗಾರ ಪರದಾಡಬೇಕು. ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಬೆಳೆಗಾರರು, ಕೃಷಿ ಕಾರ್ಮಿಕರು, ರೈತರ ನೆರವಿಗೆ ಬರಲು ಅಧಿಕಾರಿಗಳು ಮುಂದಾಗಬೇಕು. ಮಾತ್ರವಲ್ಲದೇ, ಕೊಡಗು ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿ ಜಿಲ್ಲೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಬೇರೆ ಜಿಲ್ಲೆಗಳಲ್ಲಿ ಇರುವಂತೆ ಕೊಡಗಿನಲ್ಲಿ ಕಾವೇರಿ ಮತ್ತು ಲಕ್ಷö್ಮಣತೀರ್ಥ ನದಿಗಳಿಗೆ ಚೆಕ್ ಡ್ಯಾಂಗಳಿಲ್ಲ. ಹೀಗಾಗಿ ನೀರು ಹರಿದು ಹೋಗುತ್ತಿದ್ದು, ಅಂತರ್ ಜಲದ ಕೊರತೆಯೂ ಎದುರಾಗಿದೆ. ಹೀಗಾಗಿ ಯಾವುದೇ ಸರಕಾರಗಳು ಬಂದರೂ ಕೂಡ ಕೊಡಗು ಜಿಲ್ಲೆಯನ್ನು ವಿಶೇಷ ಪ್ರದೇಶ ಎಂದು ಪರಿಗಣಿಸಿ ಪ್ರತಿ ವರ್ಷವೂ ಹೆಚ್ಚಿನ ಅನುದಾನ ಒದಗಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಚೆಪ್ಪುಡಿರ ಶರೀನ್ ಮಾತನಾಡಿ, ಫೆಬ್ರವರಿಯಿಂದ ಮಾರ್ಚ್ವರೆಗೆ ಕಾಫಿ ಬೆಳೆಗೆ ಮಳೆ ಬೇಕಿದೆ. ಅದೇ ರೀತಿ ಏಪ್ರಿಲ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕರಿಮೆಣಸು ಬೆಳೆಗೆ ಮಳೆ ಬೇಕಿದೆ. ಆದರೆ ಇದೀಗ ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದರೂ ಕೂಡ ಮಳೆಯಾಗಿಲ್ಲ. ಪರಿಣಾಮ ಈಗಾಗಲೇ ಶೇ.೫೦ರಷ್ಟು ಕಾಫಿ ಫಸಲು ನಷ್ಟವಾಗಿದೆ. ಹೀಗಾದಲ್ಲಿ ಕೊಡಗಿನ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಥಿತಿ ಏರಿಕೆಯಾಗಿಲ್ಲ
ಇದೀಗ ಕಾಫಿ ಬೆಳೆಗೆ ಭಾರೀ ಬೆಲೆ ಏರಿಕೆಯಾಗಿದೆ ಎನ್ನಲಾದರೂ ಕಳೆದ ೨೮ ವರ್ಷಗಳ ಬಳಿಕ ಬೆಲೆಯಲ್ಲಿ ಅಲ್ಪ ಏರಿಕೆಯಾಗಿರುವುದು ವಾಸ್ತವ. ಅದೇ ರೀತಿ ಕೃಷಿ ಪರಿಕರಗಳು, ಕಾರ್ಮಿಕರ ವೇತನ, ಗೊಬ್ಬರ, ತೋಟ ನಿರ್ವಹಣೆ ಕೂಡ ದುಬಾರಿಯಾಗಿದೆ.
(ಮೊದಲ ಪುಟದಿಂದ) ರಷ್ಯಾ-ಉಕ್ರೇನ್ ಕದನ, ಕೋವಿಡ್ ಪರಿಸ್ಥಿತಿಯ ನಡುವೆ ಕಾಫಿ ರಫ್ತಿನಲ್ಲಿ ಏರಿಕೆಯಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಬೆಳೆಗಾರನ ಆರ್ಥಿಕ ಸ್ಥಿತಿ ಮಾತ್ರ ಹಾಗೆಯೇ ಉಳಿದಿದೆ ಎಂದು ಹೇಳಿದರು. ಕೇಂದ್ರ ಸರಕಾರ ಕೊಡಗು ಜಿಲ್ಲೆಯನ್ನು ಕಾಫಿ ಬೆಳೆಯ ಜಿಲ್ಲೆ ಎಂದು ಘೋಷಿಸಿದೆ. ಅದರಂತೆ ಕೇಂದ್ರ ಸರಕಾರ ಜಿಲ್ಲೆಯ ಬೆಳೆಗಾರರು, ಕಾರ್ಮಿಕರ ನೆರವಿಗಾಗಿ ಪರಿಹಾರ ನೀಡಬೇಕೆಂದು ಎಂದು ಆಗ್ರಹಿಸಿದರು.
ಭೂ ಪರಿವರ್ತನೆ ಬೇಡ
ವೇದಿಕೆಯ ಪ್ರಮುಖರಾದ ಕರ್ನಲ್ ಮುತ್ತಣ್ಣ ಮಾತನಾಡಿ, ಕೊಡಗು ಜಿಲ್ಲೆಯ ಭತ್ತದ ಗದ್ದೆಗಳು, ಕಾಫಿ ತೋಟಗಳನ್ನು ಭೂ ಪರಿವರ್ತನೆ ಮಾಡಲಾಗುತ್ತಿದೆ. ಪರಿಣಾಮವಾಗಿ ಕಾವೇರಿ ನದಿ ಜಲಾನಯನ ಪ್ರದೇಶ ಸಹಿತ, ಕೆರೆ ಬಾವಿ, ಬೋರ್‌ವೆಲ್‌ಗಳಲ್ಲಿ ಬತ್ತಿ ಹೋಗಿವೆ. ಭವಿಷ್ಯದ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆರ್.ಟಿ.ಐ ಹಕ್ಕಿನ ಮೂಲಕ ದೊರೆತ ಮಾಹಿತಿಯ ಪ್ರಕಾರ ಈಗಾಗಲೇ ಜಿಲ್ಲೆಯಲ್ಲಿ ೩ ಸಾವಿರ ಎಕರೆ ಭೂ ಪ್ರದೇಶವನ್ನು ಪರಿವರ್ತನೆ ಮಾಡಲಾಗಿದೆ. ಕೊಡಗಿನಲ್ಲಿ ಬೃಹತ್ ಪ್ರಮಾಣದ ಭೂ ಪರಿವರ್ತನಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಮನವಿ ಮಾಡಿದರು. ಈ ಹಿಂದೆ ೪೦೦ ಕೆ.ವಿ ವಿದ್ಯುತ್ ಲೈನ್ ಮಾರ್ಗಕ್ಕಾಗಿ ೬೦ ಸಾವಿರ ಮರಗಳನ್ನು ಕಡಿಯಲಾಗಿದೆ. ಮಲ್ಟಿ ಹೈವೇ, ರೈಲ್ವೇ ಮಾರ್ಗ ಬಂದಲ್ಲಿ ಮತ್ತಷ್ಟು ಮರಗಳ ಹನನವಾಗಲಿದೆ ಎಂದು ಕರ್ನಲ್ ಮುತ್ತಣ್ಣ ಆತಂಕ ವ್ಯಕ್ತಪಡಿಸಿದರು. ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರಾದ ಅಣ್ಣೀರ ಹರೀಶ್ ಮಾದಪ್ಪ ಅವರು ಮಾತನಾಡಿ ಕೊಡಗು ಜಿಲ್ಲೆ ೨೦೧೮ ರಿಂದ ೨೦೨೩ರವರೆಗೆ ನಿರಂತರ ೫ ವರ್ಷಗಳ ಕಾಲ ಅತಿವೃಷ್ಟಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಿರಂತರ ಬೆಳೆನಷ್ಟವನ್ನು ಬೆಳೆಗಾರರು ಅನುಭವಿಸಿದೆ. ೨೦೨೨-೨೩ ರ ಸಾಲಿನಲ್ಲಿ ಕಾಫಿ ಬೆಳೆ ಶೇ.೫೦ ರಷ್ಟು ಕುಸಿದಿದೆ, ಪ್ರಸಕ್ತವರ್ಷ ಮಾರುಕಟ್ಟೆ ದರ ಹೆಚ್ಚಾದರೂ ಬೆಳೆ ಕುಸಿತದಿಂದ ಅದರ ಪ್ರಯೋಜನ ಬೆಳೆಗಾರರಿಗೆ ದಕ್ಕಿಲ್ಲ. ಜಿಲ್ಲೆಯಲ್ಲಿ ದಾಖಲೆಯ ೩೬.೧ ರಷ್ಟು ಉಷ್ಣಾಂಶ ದಾಖಲಾಗಿದೆ. ಇದರಿಂದ ಜಿಲ್ಲೆಯ ಹಲವು ಕಡೆ ಕಾಫಿ, ಕಾಳುಮೆಣಸು, ಅಡಿಕೆ ಇತ್ಯಾದಿ ಬೆಳೆಗಳು ಒಣಗುತ್ತಿದೆ, ಕಳೆದ ೪ ತಿಂಗಳಿನಿAದ ಮಳೆ ಸುರಿದಿಲ್ಲ. ಜಲ ಮೂಲಗಳು ಬತ್ತಿ ಬರಡಾಗಿದೆ. ಇದರ ಮೇಲೆ ಮಳೆ ಬಂದರೂ ಸಹ ಬೆಳೆ ನಷ್ಟ ಕಡಿಮೆಯಾಗುವುದಿಲ್ಲ. ಆದ್ದರಿಂದ ಜಿಲ್ಲೆಯ ಬೆಳೆಗಾರರಿಗೆ ಸರಕಾರಗಳು ವಿಶೇಷ ಪ್ಯಾಕೇಜ್ ಪ್ರಕಟಿಸಬೇಕೆಂದು ಒತ್ತಾಯಿಸಿದರು.