ಮಡಿಕೇರಿ, ಏ. ೨೧: ಮುಂಬರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮಡಿಕೇರಿಯಲ್ಲಿಂದು ಪಾದಯಾತ್ರೆ ಮಾಡುವ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಅಪ್ಪಚ್ಚು ರಂಜನ್ ಅವರು, ನಂತರ ಮಹದೇವಪೇಟೆಯಲ್ಲಿ ಕಾಲ್ನಡಿಗೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎಲ್ಲ ಕಡೆಗಳಿಂದಲೂ ಉತ್ತಮ ಸ್ಪಂದನ ದೊರಕುತ್ತಿದ್ದು, ಈ ಬಾರಿ ಗೆಲುವು ನಿಶ್ಚಿತವೆಂದು ಹೇಳಿದರು.

ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಅವರು ಪಕ್ಷ ಬಿಡಬಾರದಿತ್ತು, ತಪ್ಪು ಮಾಡಿದ್ದಾರೆ. ಲಕ್ಷö್ಮಣ ಸವದಿ ಬಿಟ್ಟು ಹೋಗಿದ್ದೇ ಒಳ್ಳೆಯದಾಯಿತು. ಅವರು ಇದ್ದಿದ್ದರೆ ಪಕ್ಷಕ್ಕೆ ನಷ್ಟವಾಗುತ್ತಿತ್ತು. ಇದೀಗ ಇಬ್ಬರು ಬಿಟ್ಟು ಹೋಗಿದ್ದರೂ ಪಕ್ಷಕ್ಕೆ ಯಾವದೇ ನಷ್ಟವಿಲ್ಲ, ಪಕ್ಷ ಸದೃಢವಾಗಿದೆ. ವರಿಷ್ಠರು ಎಲ್ಲವನ್ನು ಅವಲೋಕಿಸಿ ಅರ್ಹರಾದವರನ್ನು ಕಣಕ್ಕಿಳಿಸಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.